ADVERTISEMENT

ಭಾರತೀಯ ಬ್ರ್ಯಾಂಡ್ ಉತ್ಪನ್ನಗಳಲ್ಲಿ ನಂದಿನಿ ‘ಬ್ರ್ಯಾಂಡ್ ಮೌಲ್ಯ’ ವೃದ್ಧಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:09 IST
Last Updated 28 ಜೂನ್ 2025, 16:09 IST
ನಂದಿನಿ ಉತ್ಪನ್ನಗಳು
ನಂದಿನಿ ಉತ್ಪನ್ನಗಳು   

ಬೆಂಗಳೂರು: ಲಂಡನ್‌ನ ಪ್ರತಿಷ್ಠಿತ ‘ಬ್ರ್ಯಾಂಡ್ ಫೈನಾನ್ಸ್‌’ ಕಂಪನಿ 2025ನೇ ಸಾಲಿನ ‘ಬ್ರ್ಯಾಂಡ್ ಮೌಲ್ಯಮಾಪನ’ದ ರ‍್ಯಾಂಕ್ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್‌) ‘ನಂದಿನಿ’, ಭಾರತೀಯ ಬ್ರ್ಯಾಂಡ್ ಉತ್ಪನ್ನಗಳಲ್ಲಿ 38ನೇ ಸ್ಥಾನಕ್ಕೆ ಏರಿದೆ.

ಭಾರತದ 100 ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ‘ನಂದಿನಿ’ ಕಳೆದ ವರ್ಷ 43ನೇ ಸ್ಥಾನದಲ್ಲಿತ್ತು. ಈ ಸಾಲಿನಲ್ಲಿ ಕೆಎಂಎಫ್‌ನ ಒಟ್ಟು ಮೌಲ್ಯ ₹ 9,009.65 ಕೋಟಿಗೆ (1,079 ಮಿಲಿಯನ್‌ ಡಾಲರ್) ಮುಟ್ಟಿದೆ.

ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಭಾರತೀಯ ಬ್ರ್ಯಾಂಡ್‌ಗಳಲ್ಲಿ ನಂದಿನಿ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಪ್ರಮುಖ ಬ್ರ್ಯಾಂಡ್‌ಗಳಾದ ಅಮುಲ್, ಮದರ್ ಡೇರಿ, ಬ್ರಿಟಾನಿಯಾ ಕಂಪನಿಗಳು ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಡಾಬರ್ ಕಂಪನಿ, ನಂದಿನಿಯ ನಂತರ ಸ್ಥಾನದಲ್ಲಿದೆ.

ADVERTISEMENT

‘ಈ ಮನ್ನಣೆಗೆ ಕಾರಣರಾದ ನಮ್ಮ ಪ್ರಿಯ ಗ್ರಾಹಕರಿಗೆ, ನಿಷ್ಠಾವಂತ ಹಾಲು ಉತ್ಪಾದಕರಿಗೆ, ವಿಶ್ವಾಸಾರ್ಹ ಪಾಲುದಾರರಿಗೆ ಮತ್ತು ಸಮರ್ಪಿತ ತಂಡಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಕೆಎಂಎಫ್‌, ನಂದಿನಿ ಬ್ರ್ಯಾಂಡ್‌ನಲ್ಲಿ ಬಾದಾಮ್ ಬರ್ಫಿ, ಗೋಡಂಬಿ ಬರ್ಫಿ, ಚಾಕೊಲೇಟ್ ಬರ್ಫಿ, ಮೈಸೂರು ಪಾಕ್, ಬೇಸನ್ ಲಾಡು, ಡ್ರೈ ಫ್ರೂಟ್ ಬರ್ಫಿ, ಧಾರವಾಡ ಪೇಡಾ, ಮಿಲ್ಕ್ ಪೇಡಾ, ಜಾಮೂನ್, ರಸಗುಲ್ಲ ಸೇರಿದಂತೆ 150ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದೇ ವರ್ಷ ವಿಶ್ವ ಹಾಲು ದಿನದಂದು (ಜೂನ್ 1), ಸ್ಲೈಸ್‌ ಕೇಕ್‌, ಮಫಿನ್ಸ್ ಹಾಗೂ ಬಾರ್‌ ಕೇಕ್‌ ಎಂಬ ಮೂರು ಮಾದರಿಯ 18 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಂದಿನಿ ಹಾಲು, ಮೊಸರು, ತುಪ್ಪದಂತಹ ಉತ್ಪನ್ನಗಳ ಮಾರಾಟವನ್ನು ದೇಶದ ಉತ್ತರದ ರಾಜ್ಯಗಳಿಗೂ ವಿಸ್ತರಿಸಿದೆ. ದುಬೈನಲ್ಲೂ ಮಾರಾಟ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.