ADVERTISEMENT

ಒಂದು ವರ್ಷದಲ್ಲಿ 1,586 ಮಕ್ಕಳ ರಕ್ಷಿಸಿದ ರೈಲ್ವೆ ಇಲಾಖೆ

ರೈಲು ನಿಲ್ದಾಣಗಳಲ್ಲಿ ‘ನನ್ಹೆ ಫರಿಷ್ತೆ’ ವಿಶೇಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:16 IST
Last Updated 25 ಮೇ 2019, 19:16 IST
ಕಾಣೆಯಾದ ಮಕ್ಕಳ ಅಂತರರಾಷ್ಟ್ರೀಯ ದಿನಾಚರಣೆಯಲ್ಲಿ ಭದ್ರತಾ ಸಿಬ್ಬಂದಿ ಹಿಡಿದಿದ್ದ ಫಲಕಗಳನ್ನು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ. ವರ್ಮಾ ಮತ್ತು ರೈಲ್ವೆ ರಕ್ಷಣಾ ದಳದ ಬೆಂಗಳೂರು ವಿಭಾಗದ ಪ್ರಧಾನ ಮುಖ್ಯ ಆಯುಕ್ತ ಬಿ.ಡಿ. ಕಾಸರ್ ವೀಕ್ಷಿಸಿದರು
ಕಾಣೆಯಾದ ಮಕ್ಕಳ ಅಂತರರಾಷ್ಟ್ರೀಯ ದಿನಾಚರಣೆಯಲ್ಲಿ ಭದ್ರತಾ ಸಿಬ್ಬಂದಿ ಹಿಡಿದಿದ್ದ ಫಲಕಗಳನ್ನು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ. ವರ್ಮಾ ಮತ್ತು ರೈಲ್ವೆ ರಕ್ಷಣಾ ದಳದ ಬೆಂಗಳೂರು ವಿಭಾಗದ ಪ್ರಧಾನ ಮುಖ್ಯ ಆಯುಕ್ತ ಬಿ.ಡಿ. ಕಾಸರ್ ವೀಕ್ಷಿಸಿದರು   

ಬೆಂಗಳೂರು: ‘ನೈರುತ್ಯ ರೈಲ್ವೆಯು ‘ನನ್ಹೆ ಫರಿಷ್ತೆ’ (ಪುಟಾಣಿ ದೇವದೂತರು) ಹೆಸರಿನಲ್ಲಿ ನಡೆಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿಒಂದು ವರ್ಷದಲ್ಲಿ ಒಟ್ಟು 1,586 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ’ ಎಂದುರೈಲ್ವೆ ರಕ್ಷಣಾ ದಳದಬೆಂಗಳೂರು ವಿಭಾಗದ ಪ್ರಧಾನ ಮುಖ್ಯ ಆಯುಕ್ತ ಬಿ.ಡಿ. ಕಾಸರ್ ತಿಳಿಸಿದರು.

‘ರಕ್ಷಣೆ ಮಾಡಿದವರಲ್ಲಿ ಶೇ 50ರಷ್ಟು ಮಕ್ಕಳು ಬಿಹಾರ ಸೇರಿದಂತೆ ಉತ್ತರ ಭಾರತದ ಕಡೆಯಿಂದ ಇಲ್ಲಿಗೆ ವಲಸೆ ಬಂದವರು. ರಕ್ಷಿಸಲಾದ ರಾಜ್ಯದ ಮಕ್ಕಳಲ್ಲಿ ಉತ್ತರ ಕರ್ನಾಟಕದ ಕಡೆಯವರೇ ಹೆಚ್ಚು. ಇಂತಹ ಮಕ್ಕಳು ಮಾನವ ಕಳ್ಳಸಾಗಣೆ ಜಾಲದ ಕೈಗೆ ಸಿಲುಕಿಕೊಳ್ಳುವ ಅಪಾಯ ಹೆಚ್ಚು’ ಎಂದು ಅವರುಮಾಧ್ಯಮಗೋಷ್ಠಿಯಲ್ಲಿ ಶನಿವಾರ ಹೇಳಿದರು.

‘ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಣೆ ತಡೆಯುವ ಸಲುವಾಗಿ ಭದ್ರತಾ ಸಿಬ್ಬಂದಿಗೆ ಆಗಾಗ ತರಬೇತಿ ನೀಡಲಾಗುತ್ತಿದೆ. ಹೆಚ್ಚು ಆಸಕ್ತಿ ತೋರಿಸುವ ಸಿಬ್ಬಂದಿಯನ್ನು ಗುರುತಿಸಿ ಪುರಸ್ಕಾರವನ್ನೂ ನೀಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಬೆಂಗಳೂರಿನಲ್ಲಿಕಳೆದ ವಾರವೂ ನಾಲ್ವರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬಡತನದ ಕಾರಣ ಅಥವಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದ12ರಿಂದ 18 ವರ್ಷದೊಳಗಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಮನೆಬಿಟ್ಟು ಬರುತ್ತಿದ್ದಾರೆ. ಅಂತವರಿಗೆ ಮೊದಲು ಕೌನ್ಸೆಲಿಂಗ್ ನಡೆಸಲಾಗುವುದು. ಬಳಿಕಅವರನ್ನು ಮಕ್ಕಳ ರಕ್ಷಣಾ ಸಮಿತಿ ಮೂಲಕ ಪೋಷಕರಿಗೆ ವಶಕ್ಕೆ ಒಪ್ಪಿಸಲಾಗುತ್ತಿದೆ’ ಎಂದುರೈಲ್ವೆ ರಕ್ಷಣಾ ದಳದ ಬೆಂಗಳೂರು ವಿಭಾಗದ ಭದ್ರತಾ ಆಯುಕ್ತರಾದ ದೇಬಶ್ಮಿತಾ ಚಟ್ಟೊಪಾಧ್ಯಾಯ ಬ್ಯಾನರ್ಜಿ ತಿಳಿಸಿದರು.‌

‘ಮಕ್ಕಳ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಹಲವು ರೀತಿಯ ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದೇವೆ. ಅಲ್ಲಲ್ಲಿ ಫಲಕಗಳನ್ನು ಅಳವಡಿಸಿದ್ದೇವೆ. ಮಕ್ಕಳ ಕಳ್ಳಸಾಗಣೆ ಬಗ್ಗೆ ರೈಲ್ವೆ ನಿಲ್ದಾಣಗಳಲ್ಲಿ ಮೈಕ್‌ನಲ್ಲಿ ಘೋಷಣೆಯನ್ನೂ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ. ಮಕ್ಕಳ ರಕ್ಷಣೆಗೆ ಜನರ ಸಹಕಾರವೂ ಮುಖ್ಯ. ಅನುಮಾನಾಸ್ಪದವಾಗಿ ಮಕ್ಕಳು ಕಂಡರೆ ಚೈಲ್ಡ್‌ ಲೈನ್‌ ಸಂಖ್ಯೆ–1098ಗೆ ಕರೆ ಮಾಡಿ ಮಾಹಿತಿ ನೀಡಿ’ ಎಂದರು.

‘ರಾತ್ರಿ ವೇಳೆ ಮಕ್ಕಳು ಸಿಕ್ಕರೆ ಅವರನ್ನು ಗಾಂಧಿನಗರದಲ್ಲಿರುವ ಮಕ್ಕಳ ಆಶ್ರಯ ತಾಣದಲ್ಲಿ ಇರಿಸಿ ಊಟ, ವಸತಿ ನೀಡುತ್ತೇವೆ. ಮರುದಿನ ಬೆಳಿಗ್ಗೆ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುತ್ತೇವೆ’ ಎಂದು ಎಂದು ಕೆ.ಎಸ್.ಆರ್. ರೈಲು ನಿಲ್ದಾಣದ ಅಧಿಕಾರಿ ಸಂತೋಷ್ ಹೆಗಡೆ ಮನವಿ ಮಾಡಿದರು.

ಇದಕ್ಕೂ ಮುನ್ನ, ‘ಕಾಣೆಯಾದ ಮಕ್ಕಳ ಅಂತರರಾಷ್ಟ್ರೀಯ ದಿನ’ದ ಅಂಗವಾಗಿ ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್ (ಐಜೆಎಂ) ಎನ್‌ಜಿಒ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು.‘ನೆಮ್ಮದಿ’ ತಂಡ ಬೀದಿ ನಾಟಕ ಪ್ರದರ್ಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.