ADVERTISEMENT

ಆಗಸ್ಟ್‌ 16ರಂದು ಪ್ರಾತ್ಯಕ್ಷಿಕೆ, 20 ರಂದು ಸಮಗ್ರ ವರದಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಹಂತ ಹಂತವಾಗಿ ಜಾರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 20:16 IST
Last Updated 30 ಜುಲೈ 2020, 20:16 IST

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಹಂತಹಂತವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಆಗಸ್ಟ್‌ 16ರಂದು ಪ್ರಾತ್ಯಕ್ಷಿಕೆ ಹಾಗೂ 20ರಂದು ಸಮಗ್ರ ವರದಿ ಸಲ್ಲಿಸಲು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಗುರುವಾರ ನಡೆದ ಉನ್ನತ ಶಿಕ್ಷಣ ಕಾರ್ಯಪಡೆಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಈ ನೀತಿಯ ಕರಡು ಬಂದಾಗಲೇ ಅದನ್ನು ಪರಾಮರ್ಶಿಸಿ ಜಾರಿ ಮಾಡುವ ಕುರಿತಂತೆನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿತ್ತು.

ಈ ಕಾರ್ಯಪಡೆಯ ಸದಸ್ಯರ ಜೊತೆ ಮಹತ್ವದ ಮಾತುಕತೆ ನಡೆಸಿದ ಅಶ್ವತ್ಥನಾರಾಯಣ, ದೇಶದಲ್ಲಿಯೇ ಈ ನೀತಿಯನ್ನು ಕರ್ನಾಟಕ ಮೊದಲು ಜಾರಿ ಮಾಡುವಂತಾಗಬೇಕು. ಹೀಗಾಗಿ, ನೀತಿಯನ್ನು
ಹೇಗೆ ಜಾರಿ ಮಾಡಬೇಕು, ಎಷ್ಟು ಹಂತಗಳಲ್ಲಿ ಮಾಡಬೇಕು, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಮತ್ತಿತರ ಅಂಶಗಳ ಕುರಿತು ವಿಚಾರ ವಿನಿಮಯ ನಡೆಸಿದರು.

ADVERTISEMENT

‌ಸಭೆಯ ಬಳಿಕ ಮಾತನಾಡಿದ ಅಶ್ವತ್ಥನಾರಾಯಣ, ‘ಮೊದಲಿದ್ದ ಶಿಕ್ಷಣ ಪದ್ಧತಿ ಕೇವಲ ಅಕಾಡೆಮಿಕ್ ಕಡೆಗೇ ಹೆಚ್ಚು ಕೇಂದ್ರಿತವಾಗಿತ್ತು. ಹೊಸ ನೀತಿ 360 ಡಿಗ್ರಿಯ ವಿಶಾಲ ದೃಷ್ಟಿಕೋನದಲ್ಲಿದೆ. ಎಲ್ಲ ರೀತಿಯ ಶೈಕ್ಷಣಿಕ ಪರಿಹಾರಗಳೂ ಅದರಲ್ಲಿವೆ. ಹೀಗಾಗಿ, ದೇಶದ ಮುಂದಿನ ಬೆಳವಣಿಗೆಯಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. 34 ವರ್ಷಗಳ ನಂತರ ಆಗಿರುವ ಅತಿ ಮಹತ್ವದ ಸುಧಾರಣೆ ಇದು’ ಎಂದರು.

ಎಸ್.ವಿ. ರಂಗನಾಥ್, ಪ್ರೊ. ತಿಮ್ಮೇಗೌಡ, ಶಾಸಕ ಅರುಣ್ ಶಹಾಪುರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಸಭೆಯಲ್ಲಿದ್ದರು. ಪ್ರೊ. ಎಂ.ಕೆ. ಶ್ರೀಧರ್ ಅವರು ಆನ್‌ಲೈನ್ ಮೂಲಕ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.