ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದನ್ನು ಸ್ವಾಗತಿಸಿರುವ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್ (ಎನ್‌ಎಫ್‌ಐಡಬ್ಲ್ಯು) ರಾಜ್ಯ ಸಮಿತಿ, ಈ ಪ್ರಕರಣದಲ್ಲಿ ಏಕೈಕ ಸಾಕ್ಷಿದಾರ ಮತ್ತು ದೂರುದಾರರೂ ಆಗಿರುವ ವ್ಯಕ್ತಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದೆ.
ವ್ಯಕ್ತಿಯ ಜೀವಕ್ಕೆ ಹಾನಿಯಾದರೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅಲ್ಲಿಯ ಬಲಾಢ್ಯ ವ್ಯಕ್ತಿಗಳೇ ಹೊಣೆಯಾಗಬೇಕು. ಬಲಾಢ್ಯ ವ್ಯಕ್ತಿಗಳ, ಶಕ್ತಿಗಳ ಒತ್ತಡಕ್ಕೆ ಪೊಲೀಸ್ ಅಧಿಕಾರಿಗಳು ಮಣಿಯದೇ ವಸ್ತು ನಿಷ್ಠ ವರದಿ ನೀಡಿ ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಲಿದ್ದಾರೆ ಎಂದು ಸಮಿತಿ ಅಧ್ಯಕ್ಷೆ ಎ.ಜ್ಯೋತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಸಿಬಿಐ ಹೊರಡಿಸಿದ ಆದೇಶದಲ್ಲಿ ಸಾಕ್ಷ್ಯ ನಾಶಕ್ಕೆ ಕಾರಣರಾದ ಮತ್ತು ತನಿಖೆಯ ದಿಕ್ಕು ತಪ್ಪಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಹಾಗೂ ಮರು ತನಿಖೆಗೆ ಆದೇಶ ನೀಡಲಾಗಿದ್ದರೂ ಸರ್ಕಾರ ಯಾವ ಅಧಿಕಾರಿಯ ಮೇಲೂ ಕ್ರಮ ಕೈಗೊಂಡಿಲ್ಲ. ಅಲ್ಲದೇ ಎಸ್‌ಐಟಿ ತನಿಖೆಯಲ್ಲಿ ಸೌಜನ್ಯ ಪ್ರಕರಣವನ್ನು ಸೇರಿಸಿಲ್ಲ. ಕೇವಲ 20 ವರ್ಷಗಳ ಹಿಂದಿನ ಪ್ರಕರಣಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಧರ್ಮಸ್ಥಳದಲ್ಲಿ ಸುಮಾರು 5–6 ದಶಕಗಳಿಂದಲೂ ಇಂತಹ ದುರಂತಗಳು ನಡೆದಿರುವ ಬಗ್ಗೆ ಸ್ಥಳೀಯರು ಈಗಲೂ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಆದ್ದರಿಂದ ಅವುಗಳನ್ನು ಮತ್ತು ಸೌಜನ್ಯ ಪ್ರಕರಣವನ್ನು ಎಸ್‌ಐಟಿ ತನಿಖೆಯಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಾಕ್ಷಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಬೇಕೆನ್ನುವ ಜಿಲ್ಲಾ ಪೊಲೀಸರ ಧೋರಣೆಯನ್ನು ಖಂಡಿಸಲಾಗುವುದು. ಮುಂದೆ ಬರಬಹುದಾದ ಸಾಕ್ಷಿದಾರರನ್ನು ಬೆದರಿಸುವ ಮತ್ತು ಪರೋಕ್ಷವಾಗಿ ಆರೋಪಿಗಳ ಪರವಾಗಿ ಕೆಲಸ ಮಾಡುವ ತಂತ್ರವಾಗಿದೆ ಎಂದು ಸಮಿತಿ ಕಾರ್ಯದರ್ಶಿ ಕೆ.ರೇಣುಕಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.