ADVERTISEMENT

ಮಾದಕ ವಸ್ತು ಜಾಲ: ಆರೋಪಿ ರಿಜೇಶ್ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 22:21 IST
Last Updated 5 ಜೂನ್ 2021, 22:21 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದ ಆರೋಪಿ ರಿಜೇಶ್ ರವೀಂದ್ರನ್ ಸಲ್ಲಿಸಿದ್ದ ಎರಡು ಕ್ರಿಮಿನಲ್ ಪರಿಷ್ಕರಣೆ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು ವಲಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಗುಪ್ತಚರ ಅಧಿಕಾರಿ ಸಲ್ಲಿಸಿದ್ದ ದೂರು ಆಧರಿಸಿ 2021ರ ಫೆಬ್ರುವರಿ 20ರಂದು ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಿಜೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಾಮೀನು ನಿರಾಕರಿಸಿದ ಆದೇಶವನ್ನೂ ಅವರು ಪ್ರಶ್ನಿಸಿದ್ದರು.

‘ಎನ್‌ಸಿಬಿ ವರದಿಯನ್ನು ಸಲ್ಲಿಸಬೇಕೇ ಹೊರತು ನ್ಯಾಯಾಲಯಕ್ಕೆ ದೂರು ಸಲ್ಲಿಸಬಾರದು. ತೋಫಾನ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ’ ಎಂದು ಅರ್ಜಿದಾರ ರಿಜೇಶ್ ಪರ ವಕೀಲರು ವಾದಿಸಿದರು.

ADVERTISEMENT

‘ಎನ್‌ಸಿಬಿ ಅಧಿಕಾರಿಗಳುಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ದೂರು ದಾಖಲಿಸಿದ್ದಾರೆಯೇ ಹೊರತು, ಸಿಆರ್‌ಪಿಸಿ ಅಡಿಯಲ್ಲಿ ಅಲ್ಲ. ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುವಾಗ ಸಿಆರ್‌ಪಿಸಿಯನ್ನು ಅವಲಂಬಿಸಬೇಕಿಲ್ಲ’ ಎಂದು ಎನ್‌ಸಿಬಿ ಪರ ವಕೀಲರು ವಾದಿಸಿದರು.

‘ನಿಗದಿತ 180 ದಿನಗಳಲ್ಲಿ ಎನ್‌ಸಿಬಿ ಪೊಲೀಸರು ದೂರು ದಾಖಲಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ’ ಎಂದು ನ್ಯಾಯಮೂರ್ತಿ ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಅಭಿಪ್ರಾಯಪಟ್ಟರು.

2020ರ ಆಗಸ್ಟ್‌ 21ರಂದು ರಿಜೇಶ್ ಮನೆಯಲ್ಲಿ ಎನ್‌ಸಿಬಿ ಅಧಿಕಾರಿಗಳು ಶೋಧ ನಡೆಸಿದ್ದರು. ನಿಷೇಧಿತ ವಸ್ತುಗಳುಈ ವೇಳೆ ಪತ್ತೆಯಾದ ಕಾರಣ ಅವರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.