ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಪದವಿ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದು, ಅಭ್ಯರ್ಥಿಗಳಿಗೆ ಆಯ್ಕೆಗಳನ್ನು ಅದಲು-ಬದಲು ಮಾಡಲು, ತೆಗೆದು ಹಾಕಲು ಸೆ.18ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಸೀಟ್ ಮ್ಯಾಟ್ರಿಕ್ಸ್‌ಗೆ ಹೊಸದಾಗಿ 400 ವೈದ್ಯಕೀಯ ಸೀಟುಗಳು ಸೇರ್ಪಡೆಯಾಗಿವೆ. ಅಲ್ಲದೆ ಮೈಸೂರಿನ ಫಾರೂಕಿ ವೈದ್ಯಕೀಯ ಕಾಲೇಜು ಹೊಸದಾಗಿ ಆರಂಭವಾಗುತ್ತಿರುವ ಕಾರಣ ಆಯ್ಕೆಗಳ ಬದಲಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫಾರೂಕಿ ವೈದ್ಯಕೀಯ ಕಾಲೇಜು ಹೊಸದಾಗಿರುವ ಕಾರಣ ಆ ಕಾಲೇಜಿಗೆ ಹೊಸದಾಗಿ ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುತ್ತದೆ. ಉಳಿದಂತೆ ಬೇರೆ ಕಾಲೇಜುಗಳಿಗೆ ಆಯ್ಕೆಗಳನ್ನು ಈ ಹಂತದಲ್ಲಿ ದಾಖಲಿಸಲು ಅವಕಾಶ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಪೋಷಕರ ಜತೆ ಚರ್ಚೆ ನಡೆಸಿ, ತಮಗೆ ಸೂಕ್ತವಾದ ಹಾಗೂ ಶುಲ್ಕ ಕಟ್ಟಲು ಸಾಧ್ಯವಾಗುವಂತಹ ಕಾಲೇಜುಗಳನ್ನು, ಆಯ್ಕೆಗಳ ದಾಖಲು ಮಾಡುವ ಸಂದರ್ಭದಲ್ಲಿ ಪರಿಗಣಿಸಲು ಅವರು ಸಲಹೆ ನೀಡಿದ್ದಾರೆ.
ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜಿನಲ್ಲಿ ₹12 ಲಕ್ಷದ ಸೀಟು ₹22 ಲಕ್ಷ ಆಗಿದೆ ಎಂದು ಕೆಲವರು ಈ ಹಿಂದೆ ದೂರಿದ್ದರು. ಅಂತಹವರು ಈ ಕಾಲೇಜು ಸೇರಿದಂತೆ ದುಬಾರಿ ಶುಲ್ಕ ಅನ್ನಿಸುವ ಕಾಲೇಜುಗಳನ್ನು ಕೈಬಿಟ್ಟು, ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆಗಳನ್ನು ದಾಖಲಿಸಬೇಕು ಎಂದು ಹೇಳಿದ್ದಾರೆ.
ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ನಂತರ ಕಡ್ಡಾಯವಾಗಿ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಹೀಗಾಗಿ ಪ್ರವೇಶ ಪಡೆಯಲು ಆಸಕ್ತಿ ಇರುವ ಕಾಲೇಜುಗಳನ್ನು ಮಾತ್ರ ‘ಆಪ್ಷನ್ಸ್’ ಪಟ್ಟಿಯಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಹಿಂದಿನ ಸುತ್ತಿನಲ್ಲಿ ಎಂಜಿನಿಯರಿಂಗ್ ಇತ್ಯಾದಿ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾಗಿ ಪ್ರವೇಶ ಪಡೆದವರಿಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಅಂತಹವರು ಠೇವಣಿ ಪಾವತಿಸಿ ಪುನಃ ಆಯ್ಕೆಗಳನ್ನು ಮರುವಿಂಗಡಣೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.