ADVERTISEMENT

ಇಲಾಖೆ ನಿರ್ಲಕ್ಷ್ಯ: ಮಂಜೂರಾಗಿದ್ದ ನಿವೇಶನದ ಮಾಹಿತಿಯೇ ಇಲ್ಲ!

ಅಂಗವಿಕಲರ ಹಾಗೂ ಹಿರಿಯನಾಗರಿಕರ ಕಲ್ಯಾಣ ಇಲಾಖೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 0:05 IST
Last Updated 9 ಜೂನ್ 2024, 0:05 IST
   

ಬೆಂಗಳೂರು: ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಂಜೂರು ಮಾಡಿದ್ದ ನಿವೇಶನ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯೇ ತನ್ನ ಬಳಿ ಇಲ್ಲ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹೇಳಿದೆ.

ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಇಲಾಖೆ 2003–04ರಲ್ಲಿ ಬಿಡಿಎಗೆ ಅರ್ಜಿ ಸಲ್ಲಿಸಿತ್ತು. ಅದೇ ವರ್ಷ ನಿವೇಶನವೂ ಮಂಜೂರಾಗಿತ್ತು. ನಿವೇಶನದ ಸಂಪೂರ್ಣ ಮೊತ್ತವನ್ನು ಬಿಡಿಎಗೆ ಪಾವತಿಸಲಾಗಿತ್ತು. ಆದರೆ, ಇದುವರೆಗೂ ಆ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ. ಮಂಜೂರಾದ ನಿವೇಶನದ ಯಾವ ದಾಖಲೆಗಳೂ ಇಲಾಖೆ ಬಳಿ ಇಲ್ಲ. ನಿವೇಶನ ಎಲ್ಲಿದೆ ಎಂಬ ಮಾಹಿತಿಯೂ ಲಭ್ಯವಿಲ್ಲ.

‘ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ’ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಅವರು ಈ ಕುರಿತು ಮಾಹಿತಿ ಹಕ್ಕಿನ ಅಡಿ ಸಲ್ಲಿಸಿದ್ದ ಅರ್ಜಿಗೆ ಇಲಾಖೆ 15 ದಿನಗಳ ಕಾಲಾವಕಾಶ ಕೇಳಿತ್ತು. ಮೇಲ್ಮನವಿ ಸಲ್ಲಿಸಿದ ನಂತರ ‘ನಿವೇಶನದ ದಾಖಲೆಗಳು ಲಭ್ಯವಿಲ್ಲ’ ಎಂದು ಹಿಂಬರಹ ನೀಡಿದೆ.

ADVERTISEMENT

‘ಸ್ವಂತಕಟ್ಟಡ ನಿರ್ಮಿಸಲು ಹಣ ಪಾವತಿಸಿ ಪಡೆದ ನಿವೇಶನದ ದಾಖಲೆ, ಮಾಹಿತಿ ಗೊತ್ತಿಲ್ಲ ಎನ್ನುವುದು ಇಲಾಖೆಯ ಕಾರ್ಯನಿರ್ವಹಣೆಗೆ ಕನ್ನಡಿಯಾಗಿದೆ. ಕೂಡಲೇ ನಿವೇಶನ ಹಾಗೂ ನಿವೇಶನದ ದಾಖಲೆಗಳನ್ನು ಹುಡುಕಿಸಬೇಕು. ಅಂಗವಿಕಲರ ಹಣ ವ್ಯರ್ಥವಾಗದಂತೆ ಯೋಜನೆ ರೂಪಿಸಬೇಕು’ ಎಂದು ಚಂದ್ರಶೇಖರ ಪುಟ್ಟಪ್ಪ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.