ADVERTISEMENT

20 ಎಕರೆ ಒತ್ತುವರಿ: ಆರೋಪ

ನೆಲಮಂಗಲ ತಾಲ್ಲೂಕಿನ ಹಸಿರುವಳ್ಳಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 20:16 IST
Last Updated 1 ಅಕ್ಟೋಬರ್ 2019, 20:16 IST
ಸರ್ಕಾರಿ ಜಾಗವನ್ನು ಸಮತಟ್ಟು ಮಾಡಿರುವುದು
ಸರ್ಕಾರಿ ಜಾಗವನ್ನು ಸಮತಟ್ಟು ಮಾಡಿರುವುದು   

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಹಸಿರುವಳ್ಳಿ ಗ್ರಾಮದಲ್ಲಿ 20 ಎಕರೆಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರ್ವೆ ಸಂಖ್ಯೆ 141, 142, 166 ಹಾಗೂ 167ರಲ್ಲಿ 80 ಎಕರೆ ಸರ್ಕಾರಿ ಭೂಮಿಯಿದ್ದು, ಅದರಲ್ಲಿ ನೀಲಗಿರಿ ಬೆಳೆಯಲಾಗಿತ್ತು. ಇತ್ತೀಚೆಗೆ ಜಿಲ್ಲಾಡಳಿತವು ನೀಲಗಿರಿ ಮರಗಳನ್ನು ತೆರವುಗೊಳಿಸಿತ್ತು.

‘ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಕಾರದಲ್ಲಿ ಹಸಿರುವಳ್ಳಿ ಪಂಚಾಯಿತಿ ವತಿಯಿಂದ ನೀಲಗಿರಿ ತೆರವಾದ ಜಾಗದಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಮುಂದಾಗಿದ್ದೇವೆ. ಆದರೆ, ಇದು ತಮಗೆ ಸೇರಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಗುಳಿಗಳನ್ನು ಮುಚ್ಚಿ, ಟ್ರ‍್ಯಾಕ್ಟರ್‌ನಲ್ಲಿ ಉಳುಮೆ ಮಾಡಿಸಿ ಹುರುಳಿ ಚೆಲ್ಲಿದ್ದಾರೆ’ ಎಂದು ಗ್ರಾಮ ‍ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ ಆರೋಪಿಸಿದರು.

ADVERTISEMENT

‘ಸರ್ಕಾರಿ ಜಾಗ ಒತ್ತುವರಿಯಾಗಿರುವ ಸಂಬಂಧ ಕಂದಾಯ ಇಲಾಖೆಯ ಗಮನಕ್ಕೆ ಹಲವು ಬಾರಿ ತಂದಿದ್ದೇವೆ. ಒತ್ತುವರಿಯನ್ನು ಕಂದಾಯ ಇಲಾಖೆ ತೆರವುಗೊಳಿಸಬೇಕು’ ಎಂದರು.

ತಹಶೀಲ್ದಾರ್‌ ಶ್ರೀನಿವಾಸಯ್ಯ ಪ್ರತಿಕ್ರಿಯಿಸಿ, ‘1978–79ರಲ್ಲಿ ಕೆಲವರು ಬಗರ್‌ ಹುಕುಂ ಅಡಿಯಲ್ಲಿ ಅರ್ಜಿ ಹಾಕಿಕೊಂಡಿದ್ದರು. ಅವರಿಗೆ ಸರ್ಕಾರದ ಕಡೆಯಿಂದ ದರಕಾಸ್ತು ಮಾಡಲಾಗಿತ್ತು. ಆದರೆ, ದರಾಕಾಸ್ತು ಆದ ನಂತರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಡೆಯಾಜ್ಞೆ ಆಗಿದೆ. ಉಳುಮೆ ಮಾಡುವಂತಿಲ್ಲ. ಜಾಗದ ಅತಿಕ್ರಮ ತಡೆಯಲು ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.