ADVERTISEMENT

ನೆಟ್‌ ಮೀಟರಿಂಗ್‌: 31ಕ್ಕೆ ಸಭೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 5:13 IST
Last Updated 16 ಏಪ್ರಿಲ್ 2021, 5:13 IST

ಬೆಂಗಳೂರು: 5 ಕಿಲೊವಾಟ್‌ವರೆಗೆ ವಿದ್ಯುತ್‌ ಉತ್ಪಾದಿಸುವ ಸೌರಚಾವಣಿ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ನೆಟ್‌ ಮೀಟರಿಂಗ್‌ ಸೌಲಭ್ಯ ಹಿಂತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಿರುವ ಕೇಂದ್ರ ಸರ್ಕಾರದ ನಿಲುವನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರ ಸಂಘ ಸ್ವಾಗತಿಸಿದೆ.

10 ಕಿಲೊವಾಟ್‌ ವಿದ್ಯುತ್‌ಗಿಂತ ಹೆಚ್ಚು ಉತ್ಪಾದಿಸುವ ಸೌರಚಾವಣಿ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ನೆಟ್‌ ಮೀಟರಿಂಗ್ ಸೌಲಭ್ಯ ಹಿಂತೆಗೆದುಕೊಂಡಿರುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಈ ಕುರಿತು 2020ರ ಡಿ.31ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

‘ಈಗ 5 ಕೆವಿ ವಿದ್ಯುತ್‌ ಉತ್ಪಾದಿಸುವ ಸೌರಚಾವಣಿ ಘಟಕಗಳಿಗೆ ನೆಟ್‌ಮೀಟರಿಂಗ್‌ ಅವಕಾಶ ನೀಡುವ ಬಗ್ಗೆ ಚರ್ಚೆಗೆ ಕರೆಯಲಾಗಿದೆ. ಏ.30ರಂದು ಸಭೆ ನಡೆಯಲಿದೆ' ಎಂದು ಸಂಘದ ಅಧ್ಯಕ್ಷ ರಮೇಶ್‌ ಶಿವಣ್ಣ ಹೇಳಿದರು.

ADVERTISEMENT

‘ನೆಟ್‌ ಮೀಟರಿಂಗ್‌ ವ್ಯವಸ್ಥೆ ಬಂದಿದ್ದರೆ, ನಾವು ಉತ್ಪಾದಿಸಿದ ಎಲ್ಲ ವಿದ್ಯುತ್‌ ಅನ್ನು ಸರ್ಕಾರಕ್ಕೆ ಯುನಿಟ್‌ಗೆ ₹3ರಂತೆ ಮಾರಾಟ ಮಾಡಬೇಕು. ಅದೇ ವಿದ್ಯುತ್‌ ಅನ್ನು ನಾವು ಖರೀದಿಸಿದರೆ ಯುನಿಟ್‌ಗೆಅಂದಾಜು ₹7 ನೀಡಬೇಕು. ಈ ವ್ಯವಸ್ಥೆ ಜಾರಿಗೆ ಬಂದಿದ್ದರೆ ಸೌರವಿದ್ಯುತ್ ಉತ್ಪಾದನೆಯನ್ನು ಉದ್ಯಮವಾಗಿ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ’ ಎಂದು ಅವರು ಹೇಳಿದರು.

‘ನಾವೇ ಉತ್ಪಾದಿಸಿದ ವಿದ್ಯುತ್‌ ಅನ್ನು ನಮ್ಮ ಬಳಕೆಗೆ ಬಿಡಬೇಕು. ಸರ್ಕಾರ ಅಥವಾ ಬೆಸ್ಕಾಂಗೆ ಮಾರಾಟ ಮಾಡುವ ಹೆಚ್ಚುವರಿ ವಿದ್ಯುತ್‌ಗೆ ಮಾತ್ರ ಸರ್ಕಾರ ದರ ನಿಗದಿ ಮಾಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.