ADVERTISEMENT

‘ಹಿರಿಯ ನಾಗರಿಕರ ಸಮಸ್ಯೆಗೆ ತಾಂತ್ರಿಕ ಪರಿಹಾರ’

ಪರಸ್ಪರ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ಕರ್ನಾಟಕ– ನೆದರ್ಲೆಂಡ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:56 IST
Last Updated 17 ಅಕ್ಟೋಬರ್ 2019, 19:56 IST

ಬೆಂಗಳೂರು: ‘ನಾವು ಬಳಸುವ ಒಟ್ಟು ಔಷಧದಲ್ಲಿ ಶೇ 40ರಷ್ಟು ಭಾರತದಿಂದಲೇ ಪೂರೈಕೆಯಾಗುತ್ತದೆ. 2030ರ ವೇಳೆಗೆ ನೆದರ್ಲೆಂಡ್‌ನಲ್ಲಿ ಹಿರಿಯ ನಾಗರಿಕರ ಪ್ರಮಾಣ ಶೇ 25ಕ್ಕೆ ಹೆಚ್ಚಲಿದೆ. ಅವರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವ ಸವಾಲು ನಮ್ಮೆದುರು ಇದ್ದು, ಭಾರತದೊಂದಿಗಿನ ಒಪ್ಪಂದದಿಂದ ಈ ಸವಾಲು ಎದುರಿಸಲು ಅನುಕೂಲವಾಗಲಿದೆ’ ಎಂದುನೆದರ್ಲೆಂಡ್‌ನ ಆರೋಗ್ಯ ಸಚಿವ ಬ್ರುನೋ ಬ್ರ್ಯುನ್ಸ್‌ ಹೇಳಿದರು.

ಜೀವವಿಜ್ಞಾನ ಮತ್ತು ಆರೋಗ್ಯ ರಕ್ಷಣೆ, ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ನೆದರ್ಲೆಂಡ್‌ ಮಾಡಿಕೊಂಡಿರುವ ನಾಲ್ಕು ಪರಸ್ಪರ ಸಹಕಾರ ಒಪ್ಪಂದಗಳ ಕುರಿತು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

‘ಟೆಲಿ ಮೆಡಿಸಿನ್‌ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತೀಯ ಆರೋಗ್ಯ ಸೇವಾ ಸೌಲಭ್ಯಗಳನ್ನು ನೆದರ್ಲೆಂಡ್‌ನಲ್ಲಿ ಬಳಸಿಕೊಳ್ಳುವ ಉದ್ದೇಶ ನಮ್ಮದು’ ಎಂದು ತಿಳಿಸಿದರು.

ADVERTISEMENT

‘ನೆದರ್ಲೆಂಡ್‌ ಜನಸಂಖ್ಯೆಯ ಸರಾಸರಿ ವಯಸ್ಸು 45ವರ್ಷವಿದ್ದರೆ, ಭಾರತದ ಜನಸಂಖ್ಯೆಯ ಸರಾಸರಿ ವಯಸ್ಸು 28 ವರ್ಷವಿದೆ. ಉನ್ನತ ಶಿಕ್ಷಣದೊಂದಿಗೆ ಹೆಚ್ಚು ಕೌಶಲ ಹೊಂದಿರುವ ಭಾರತದ ಯುವಸಮೂಹದ ಪ್ರತಿಭೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಆರೋಗ್ಯ ರಕ್ಷಣೆ ವಲಯದಲ್ಲಿ ಕರ್ನಾಟಕವು ನೆದರ್ಲೆಂಡಿನ ಬಹುಮುಖ್ಯ ಪಾಲುದಾರ ರಾಜ್ಯವಾಗಿದೆ. ಜೈವಿಕ ತಂತ್ರಜ್ಞಾನದ ಹೊಸ ಸಂಶೋಧನೆಗಳು ಮತ್ತು ವೈಜ್ಞಾನಿಕ ಬೆಳವಣಿಗೆಯಲ್ಲಿ ಬೆಂಗಳೂರು ಸಾಕಷ್ಟು ಪ್ರಗತಿ ಸಾಧಿಸಿದೆ’ ಎಂದು ಅವರು ಹೇಳಿದರು.

ನೆದರ್ಲೆಂಡ್‌ನ ಬೆಂಗಳೂರು ರಾಯಭಾರಿ ಗೆರ್ಟ್‌ ಹೀಜ್‌ಕೂಪ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಒಪ್ಪಂದಗಳು

* ಡಚ್‌ನ ಕೇರ್‌ ಅನಿಮೇಷನ್ಸ್‌–ಬೆಂಗಳೂರಿನ ನಿಮ್ಹಾನ್ಸ್‌ ನಡುವೆ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಚಿಕಿತ್ಸೆ ಕುರಿತು ಸಹಭಾಗಿತ್ವ

* ಸಾರ್ವಜನಿಕ ಆರೋಗ್ಯ ಜಾಗೃತಿ, ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ ಕುರಿತು ಕೇರ್‌ ಅನಿಮೇಷನ್ಸ್‌ ಮತ್ತು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯ ನಡುವೆ ಸಹಭಾಗಿತ್ವ

* ಭಾರತದಲ್ಲಿನ ಖಾಸಗಿ ಆಸ್ಪತ್ರೆ ವಲಯ ಅಭಿವೃದ್ಧಿ ಮತ್ತು ರೋಗಿ ಕೇಂದ್ರಿತ ಸೇವಾ ಸೌಲಭ್ಯಗಳ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಒಪ್ಪಂದ

* ಡಿಎನ್‌ಎ, ವಂಶವಾಹಿ ಸ್ಥಿರತೆ ಮುಂತಾದ ವಿಷಯಗಳಲ್ಲಿ ಆಧುನಿಕ ತಂತ್ರಜ್ಞಾನ ಅನ್ವಯಕಗಳ ಬಳಕೆ ಕುರಿತು ಸಹಭಾಗಿತ್ವ

‘ಬ್ರೆಕ್ಸಿಟ್‌: ಭಾರತೀಯರಿಗೆ ತೊಂದರೆಯಿಲ್ಲ’

‘ಯುರೋಪ್‌ ಒಕ್ಕೂಟದಿಂದ ಬ್ರಿಟನ್‌ ಹೊರಗೆ ಬರುತ್ತಿರುವುದರಿಂದ (ಬ್ರೆಕ್ಸಿಟ್‌) ನೆದರ್ಲೆಂಡ್‌ನಲ್ಲಿನ ಭಾರತೀಯ ಕಂಪನಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದುನೆದರ್ಲೆಂಡ್‌ನ ಆರೋಗ್ಯ ಸಚಿವ ಬ್ರುನೋ ಬ್ರ್ಯುನ್ಸ್‌ ಹೇಳಿದರು.

‘ಇಂಗ್ಲೆಂಡ್‌ನಲ್ಲಿರುವ ಕೆಲವು ಭಾರತೀಯ ಕಂಪನಿಗಳು ಬ್ರೆಕ್ಸಿಟ್‌ ನಂತರ ನೆದರ್ಲೆಂಡ್‌ಗೆ ಸ್ಥಳಾಂತರಗೊಳ್ಳಬಹುದು. ನೆದರ್ಲೆಂಡ್‌ನಲ್ಲಿಯೂ ಹೆಚ್ಚು ಜನ ಇಂಗ್ಲಿಷ್‌ ಮಾತನಾಡುವುದರಿಂದ ಇಂತಹ ಕಂಪನಿಗಳು ಕಾರ್ಯಾಚರಿಸಲು ಯಾವುದೇ ತೊಂದರೆಯಾಗಲಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.