ADVERTISEMENT

ದಂಡು ರೈಲು ನಿಲ್ದಾಣಕ್ಕೆ ಹೊಸ ವಿನ್ಯಾಸ: ₹442 ಕೋಟಿ ಮೊತ್ತದ ಯೋಜನೆ

₹442 ಕೋಟಿ ಮೊತ್ತದ ಯೋಜನೆ: ಟೆಂಡರ್ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:56 IST
Last Updated 2 ಜೂನ್ 2022, 19:56 IST
ಹೊಸ ರೂಪ ಪಡೆಯಲಿರುವ ದಂಡು ರೈಲು ನಿಲ್ದಾಣದ ವಿನ್ಯಾಸ
ಹೊಸ ರೂಪ ಪಡೆಯಲಿರುವ ದಂಡು ರೈಲು ನಿಲ್ದಾಣದ ವಿನ್ಯಾಸ   

ಬೆಂಗಳೂರು: ‌ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡೇ ದಂಡು ರೈಲು ನಿಲ್ದಾಣಕ್ಕೆ ಹೊಸ ವಿನ್ಯಾಸ ನೀಡಲು ನೈರುತ್ಯ ರೈಲ್ವೆ ಮುಂದಾಗಿದೆ. ₹442 ಕೋಟಿ ಮೊತ್ತದ ಯೋಜನೆ ರೂಪಿಸಿದ್ದು, ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.

ವಿಮಾನ ನಿಲ್ದಾಣ ಮಾದರಿಯ ವಿನ್ಯಾಸದೊಂದಿಗೆ ವಿವಿಧ ಹಂತದ ವಾಹನಗಳ ನಿಲುಗಡೆ ತಾಣ, ಮಳೆನೀರು ಸಂಗ್ರಹ, ಸೌರ ವಿದ್ಯುತ್ ಚಾವಣಿಯನ್ನು ಒಳಗೊಂಡಂತೆ ನಿಲ್ದಾಣ ದಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲು ಯೋಜನೆ
ರೂಪಿಸಿದೆ.

ಈಗಿರುವಂತೆಯೇ ವಸಂತನಗರ ಭಾಗಕ್ಕೆ ಮುಖ್ಯ ಪ್ರವೇಶ ದ್ವಾರ, ಮಿಲ್ಲರ್ಸ್ ರಸ್ತೆ ಕಡೆಗೆ ಎರಡನೇ ಪ್ರವೇಶ ದ್ವಾರ ನಿರ್ಮಿಸಲು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರವೇಶ ದ್ವಾರಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆ ಆಗದಂತೆ ಎರಡೂ ಕಡೆ ಪ್ರತ್ಯೇಕ ಟಿಕೆಟ್ ವಿತರಿಸುವ ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಿದೆ. ಎರಡೂ ಪ್ರವೇಶ ದ್ವಾರದ ಕಡೆಯೂ ಎರಡು ಮಹಡಿಗಳಲ್ಲಿ ವಾಹನಗಳ ನಿಲುಗಡೆ ತಾಣ ನಿರ್ಮಿಸವುದನ್ನು ಯೋಜನೆ
ಒಳಗೊಂಡಿದೆ.

ADVERTISEMENT

‘ದಿನಕ್ಕೆ 100ಕ್ಕೂ ಹೆಚ್ಚು ರೈಲುಗಳು ಈ ನಿಲ್ದಾಣವನ್ನು ಹಾದು ಹೋಗುತ್ತಿದ್ದು, 55 ಸಾವಿರ ಪ್ರಯಾಣಿಕರು ನಿಲ್ದಾಣ ಬಳಕೆ ಮಾಡಿರುವ ದಿನಗಳೂ ಇವೆ. ಮುಂದಿನ ದಿನಗಳಲ್ಲಿ ಉಪನಗರ ರೈಲುಗಳು ಇದೇ ನಿಲ್ದಾಣಕ್ಕೆ ಬಂದು ಹೋಗಲಿದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

‘ವಿಶ್ವ ದರ್ಜೆಯ ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅಂಗವಿಕಲರು, ವೃದ್ಧರು ನಿಲ್ದಾಣ ಪ್ರವೇಶಿಸಲು ಅನುಕೂಲ ಆಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ‘ಪ್ರಜಾವಾಣಿ’ಗೆ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.