ADVERTISEMENT

ಸೆಲ್ಕೊ: ‘ಸೂರ್ಯಮಿತ್ರ’ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 20:24 IST
Last Updated 11 ಸೆಪ್ಟೆಂಬರ್ 2022, 20:24 IST
ನೇವಿಲ್ಲೆ ವಿಲಿಯಮ್ಸ್‌
ನೇವಿಲ್ಲೆ ವಿಲಿಯಮ್ಸ್‌   

ಬೆಂಗಳೂರು: ಸೆಲ್ಕೊ ಸಂಸ್ಥೆಯ ಅಂತರರಾಷ್ಟ್ರೀಯ ‘ಸೂರ್ಯಮಿತ್ರ’ ವಾರ್ಷಿಕ ಪ್ರಶಸ್ತಿಗೆ ಸೌರತಜ್ಞರಾದ ನೇವಿಲ್ಲೆ ವಿಲಿಯಮ್ಸ್, ರಿಚೆಂಡಾ ವಾನ್ ಲೀವೆನ್ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆ ಭಾಜನವಾಗಿದೆ. ‌

ಸೌರಶಕ್ತಿಯ ಉಪಯೋಗ ಉತ್ತೇಜಿಸುತ್ತಿರುವ ನೇವಿಲ್ಲೆ ವಿಲಿಯಮ್ಸ್ 2020ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ‘ಸೋಲಾರ್ ಎಲೆಕ್ಟ್ರಿಕಲ್ ಲೈಟ್ ಫಂಡ್’ (ಎಸ್‌ಇಎಲ್‌ಎಫ್‌) ಅನ್ನು 1990 ರಲ್ಲಿ ವಾಷಿಂಗ್ಟನ್‌ನಲ್ಲಿ ಸ್ಥಾಪಿಸಿದ್ದರು.

2021 ನೇ ಸಾಲಿನ ಪ್ರಶಸ್ತಿಗೆ ಇಂಧನ ಬಳಕೆ ಕುರಿತ ಜಾಗತಿಕ ಮನ್ನಣೆ ಪಡೆದ ತಜ್ಞೆ ರಿಚೆಂಡಾ ವಾನ್ ಲೀವೆನ್ ಆಯ್ಕೆಯಾಗಿದ್ದಾರೆ. ರಿಚೆಂಡಾ ಪ್ರಸ್ತುತ ‘ಆಸ್ಪೆನ್ ನೆಟ್‌ವರ್ಕ್ ಆಫ್ ಡೆವಲಪ್‌ಮೆಂಟ್ ಎಂಟಪ್ರೆನರ್ಸ್‌ ’ನ ಕಾರ್ಯನಿರ್ವಾಹಕ ನಿರ್ದೇಶಕಿ. ಶುದ್ಧ ಇಂಧನ ಪರಿಹಾರಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ರಾಯಭಾರಿಯಾಗಿ ಕೆಲಸ ಮಾಡುತ್ತಿರುವ ಅವರು ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ.

ADVERTISEMENT

2022 ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕದ ವಿವಿಧೆಡೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮೂಲ ಸೌಕರ್ಯ ಬಲಪಡಿಸುವ ಕೆಲಸ ಮಾಡುತ್ತಿರುವ ‘ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ ಸಂಸ್ಥೆ’ (ಎಸ್‌ವಿವೈಎಂ) ಪಾತ್ರವಾಗಿದೆ. ಡಾ.ಆರ್.ಬಾಲಸುಬ್ರಮಣ್ಯಂ ನೇತೃತ್ವದಲ್ಲಿ 1984 ರಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಸೆ.24 ರಂದು ಸಂಜೆ ನಡೆಯಲಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ.ಎಚ್.ಹರೀಶ್ ಹಂದೆ ಸ್ಥಾಪಕರಾಗಿರುವ ಸೆಲ್ಕೋ ಸಂಸ್ಥೆ 2012ರಿಂದ ಈ ಪ್ರಶಸ್ತಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.