ADVERTISEMENT

ನಿಮ್ಹಾನ್ಸ್‌ನ ಒಸಿಡಿ ಕ್ಲಿನಿಕನ ರಜತ ಮಹೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 20:02 IST
Last Updated 10 ನವೆಂಬರ್ 2022, 20:02 IST

ಬೆಂಗಳೂರು: ನಿಮ್ಹಾನ್ಸ್‌ ಒಸಿಡಿ ಕ್ಲಿನಿಕ್‌ನ 25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಗೀಳುರೋಗ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ನವೆಂಬರ್ 11ರಿಂದ 13ರ ವರೆಗೆ ನಿಮ್ಹಾನ್ಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ.

‘ಗೀಳುರೋಗವನ್ನು ಪರೀಕ್ಷಿಸುವ ಮತ್ತು ಉಪಚರಿಸುವ ಅತಿ ದೊಡ್ಡ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ. ಇದೊಂದು ಮಾನಸಿಕ ರೋಗವಾಗಿದ್ದು, ಇದರಲ್ಲಿ ಗೀಳು ಮತ್ತು ಒತ್ತಡಪೂರಿತ ನಡುವಳಿಕೆಗಳೆಂಬ ಗುಣ ಲಕ್ಷಣಗಳು ಇರುತ್ತವೆ’ ಎಂದು ಒಸಿಡಿ ಕ್ಲಿನಿಕ್ ಮುಖ್ಯಸ್ಥ ಡಾ.ಜನಾರ್ದನ ರೆಡ್ಡಿ ಗುರುವಾರ ಸುದ್ದಿಗೋಷ್ಠಿ ತಿಳಿಸಿದರು.

‘ಅರ್ಥಹೀನ ಹಾಗೂ ಅತೀರೇಕ ಎಂದು ತಿಳಿದರೂ ತಡೆಯಲಾಗದೆ ಪದೇ ಪದೇ ಮನದಲ್ಲಿ ಪುನರಾವರ್ತಿಸುವ ಯೋಚನೆಗಳು ಅಥವಾ ಚಿತ್ರಗಳನ್ನು ಗೀಳು ಎಂದು ಹೇಳಲಾಗುತ್ತದೆ. ಈ ಆಲೋಚನೆಗಳಿಂದ ಆಗುವ ಆತಂಕ ತೀವ್ರವಾಗಿರುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಒಬ್ಬ ವ್ಯಕ್ತಿ ಒತ್ತಡಪೂರಿತ ನಡುವಳಿಕೆಗಳನ್ನು ತೋರುತ್ತಾನೆ. ಗೀಳಿನ ಕ್ರಿಯೆಗೆ ಪ್ರತಿಕ್ರಿಯೆಗೆಯಾಗಿ ಅವುಗಳನ್ನು ನಿಯಂತ್ರಿಸಲು ಮಾಡುವ ಪುನರಾವರ್ತಿಸುವ ಕ್ರಿಯೆಗಳನ್ನು ಒತ್ತಡಪೂರಿತ ನಡುವಳಿಕೆಗಳೆಂದು ಹೇಳಬಹುದು’ ಎಂದು ಅವರು ಹೇಳಿದರು.

ADVERTISEMENT

‘ಒಸಿಡಿ ಕ್ಲಿನಿಕ್‌ನಲ್ಲಿ ಗೀಳು ರೋಗ ಜೊತೆ ಗೀಳು ಸಂಬಂಧಿ ರೋಗಗಳಾದ ಬಾಡಿ ಡಿಸ್ಮಾರ್ಫಿಕ್‌ ಡಿಸಾರ್ಡರ್‌ (ತಮ್ಮ ಶಾರೀರಿಕ ಊನದ ಚಿಂತೆ), ಕೂದಲು ಕಿತ್ತುಕೊಳ್ಳುವ ತುಡಿತ, ಪದೇ ಪದೇ ಚರ್ಮವನ್ನು ಕೀಳುವ ಇತ್ಯಾದಿ ಕಾಯಿಲೆಗಳಿಗೆ ಚಿಕತ್ಸೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಈ ವಿಶೇಷ ಕ್ಲಿನಿಕ್ ಪ್ರತಿ ಮಂಗಳವಾರ ಹೊರರೋಗಿಗಳಿಗೆ ಸೇವೆ ನೀಡುತ್ತದೆ. ತೀವ್ರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆಪ್ತ ಸಮಾಲೋಚನೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಕಳೆದ 25 ವರ್ಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.