ADVERTISEMENT

₹ 712 ಕೋಟಿ ವಂಚನೆ; ನಿತೇಶ್ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 9:44 IST
Last Updated 7 ಜುಲೈ 2021, 9:44 IST

ಬೆಂಗಳೂರು: ಯೆಸ್ ಬ್ಯಾಂಕ್‌ನಿಂದ ₹ 712 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪದಡಿ ನಗರದ ನಿತೇಶ್ ಸಮೂಹ ಸಂಸ್ಥೆಗಳ ವಿರುದ್ಧ ಕಬ್ಬನ್‌ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಯೆಸ್‌ ಬ್ಯಾಂಕ್‌ನ ಕಸ್ತೂರ್‌ಬಾ ರಸ್ತೆಯಲ್ಲಿರುವ ಶಾಖೆಯ ವ್ಯವಸ್ಥಾಪಕ ಆಶಿಷ್ ವಿನೋದ್ ಜೋಷಿ ಅವರು ದೂರು ನೀಡಿದ್ದಾರೆ. ನಿತೇಶ್ ಸಮೂಹ ಸಂಸ್ಥೆಗಳು ಸೇರಿ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ನಿತೇಶ್ ಎಸ್ಟೇಟ್ಸ್, ನಿತೇಶ್ ಹೌಸಿಂಗ್ ಡೆವಲಪರ್ಸ್, ನಿತೇಶ್ ಅರ್ಬನ್ ಡೆವಲಪ್‌ಮೆಂಟ್, ನಿತೇಶ್ ಶೆಟ್ಟಿ ಪ್ರಮೋಟರ್ಸ್ ಆಡಳಿತ ಮಂಡಳಿ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ADVERTISEMENT

ಸಪ್ತ ಋಷಿ ವೈದ್ಯನಾಥನ್, ಕುಮಾರ್ ನೆಲ್ಲೂರು ಗೋಪಾಲಕೃಷ್ಣನ್, ಸುಬ್ರಮಣ್ಯನ್ ಅನಂತನಾರಾಯಣ್, ಪ್ರದೀಪ್ ನಾರಾಯಣ್, ಮಹೇಶ್ ಭೂಪತಿ, ಚಂದ್ರಶೇಖರ್ ಪ್ರಶಾಂತ್ ಕುಮಾರ್ ಹಾಗೂ ಇತರರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.

‘ಎಂ.ಜಿ. ರಸ್ತೆಯಲ್ಲಿ ನಿತೇಶ್ ಸಮೂಹ ಸಂಸ್ಥೆಗಳ ಕಚೇರಿ ಇದೆ. ಪ್ರಕರಣ ದಾಖಲಾಗುತ್ತಿದ್ದಂತೆ ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆಯಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದೂ ಹೇಳಿವೆ.

ಯೋಜನೆಗಳಿಗಾಗಿ ಸಾಲ: ‘ಹೈಡ್ ಪಾರ್ಕ್, ಕೊಲಂಬಸ್ ಸ್ಕ್ವೇರ್, ನಾಪವ್ಯಾಲಿ, ಪಿಷರ್ ದ್ವೀಪ, ಮೆಲ್ಬೊರ್ನ್ ಪಾರ್ಕ್, ನ್ಯೂ ಥಣಿಸಂದ್ರ, ಗ್ರಾಂಡ್ ಕ್ಯಾನಿಯನ್, ಕೇಪ್ ಕಾರ್ಡ್, ಪಾಲೋ ಹಾಲ್ಟೊ, ಶಾಂತಕ್ಲಾರ, ನಿತೇಶ್ ಪ್ಲಾಜಾ ಹಾಗೂ ನಿತೇಶ್ ಸಾಹೋ ಯೋಜನೆಗಳ ಅಭಿವೃದ್ಧಿಗಾಗಿ ಆರೋಪಿಗಳು ಬ್ಯಾಂಕ್‌ನಿಂದ ₹ 712 ಕೋಟಿ ಸಾಲ ಪಡೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳು, ಇದುವರೆಗೂ ಸಾಲ ಮರು ಪಾವತಿಸಿಲ್ಲ. ಅಪರಾಧ ಸಂಚು ರೂಪಿಸಿದ್ದ ಆರೋಪಿಗಳು ನಂಬಿಕೆ ದ್ರೋಹವೆಸಗಿ ವಂಚಿಸಿರುವುದಾಗಿ ದೂರುದಾರರು ಆರೋಪಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.