ADVERTISEMENT

6 ಸಾವಿರ ಹಳ್ಳಿಗಳಲ್ಲಿ ಸ್ಮಶಾನವಿಲ್ಲ: ಕಂದಾಯ ಇಲಾಖೆ ಪ್ರಮಾಣ ಪತ್ರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 20:01 IST
Last Updated 5 ಡಿಸೆಂಬರ್ 2018, 20:01 IST
   

ಬೆಂಗಳೂರು: ‘ರಾಜ್ಯದ 29,518 ಹಳ್ಳಿಗಳ ಪೈಕಿ 6,053 ಹಳ್ಳಿಗಳಲ್ಲಿ ಸ್ಮಶಾನಗಳಿಲ್ಲ’ ಎಂದು ಕಂದಾಯ ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ.

‘ರಾಜ್ಯದೆಲ್ಲೆಡೆ ಸ್ಮಶಾನ ಭೂಮಿ ಕಾಯ್ದಿರಿಸುವ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿ ನಗರದ ವಕೀಲರೂ ಆದ ಮೊಹಮದ್‌ ಇಕ್ಬಾಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಶಿವಪ್ರಭು ಹಿರೇಮಠ ಅವರು ಈ ಕುರಿತಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

‘281 ಪಟ್ಟಣಗಳಲ್ಲಿ ಸ್ಮಶಾನಗಳ ಅಗತ್ಯವಿದೆ. ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ಜಾಗ ಖರೀದಿಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ₹ 10 ಕೋಟಿ ಮೀಸಲಿಡಲಾಗಿದೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘₹ 10 ಕೋಟಿ ಮೊತ್ತ ಸಾಕಾಗುತ್ತದೆಯೇ, ಸ್ಮಶಾನ ಇಲ್ಲದಿರುವ ಕಡೆ ಏನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರಲ್ಲದೆ, ‘ಈ ಪ್ರಮಾಣ ಪತ್ರ ಅಪೂರ್ಣವಾಗಿದೆ. ಈ ಕುರಿತಂತೆ ಸಮಗ್ರ ಕಾರ್ಯನೀತಿಯ ವರದಿ ನೀಡಿ’ ಎಂದು ಸೂಚಿಸಿ, ವಿಚಾರಣೆಯನ್ನು 2019ರ ಜನವರಿ 16ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.