ADVERTISEMENT

ದಾನಿಗಳಿಲ್ಲದೆ ಬರಿದಾಗುತ್ತಿದೆ ಚರ್ಮ ಬ್ಯಾಂಕ್

ಆರು ತಿಂಗಳಲ್ಲಿ ಒಬ್ಬರಿಂದ ಮಾತ್ರ ಚರ್ಮ ದಾನ * ಕೋವಿಡ್‌ನಿಂದಾಗಿ ದಾನಿಗಳು ಹಿಂದೇಟು

ವರುಣ ಹೆಗಡೆ
Published 1 ಸೆಪ್ಟೆಂಬರ್ 2020, 20:35 IST
Last Updated 1 ಸೆಪ್ಟೆಂಬರ್ 2020, 20:35 IST
ಸ್ಕಿನ್ ಬ್ಯಾಂಕ್ ಮೇಲ್ವಿಚಾರಕ ಬಿ.ಎನ್. ನಾಗರಾಜ್ ಅವರು ಗ್ಲಿಸರಾಲ್ ಬಳಸಿ ಚರ್ಮ ಸಂಗ್ರಹಿಸುತ್ತಿರುವುದು – ಪ್ರಜಾವಾಣಿ ಚಿತ್ರ
ಸ್ಕಿನ್ ಬ್ಯಾಂಕ್ ಮೇಲ್ವಿಚಾರಕ ಬಿ.ಎನ್. ನಾಗರಾಜ್ ಅವರು ಗ್ಲಿಸರಾಲ್ ಬಳಸಿ ಚರ್ಮ ಸಂಗ್ರಹಿಸುತ್ತಿರುವುದು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ ಹಾಗೂ ಕೋವಿಡ್‌ನಿಂದಾಗಿ ಚರ್ಮ ಸಂಗ್ರಹಣೆಗೆ ಹಿನ್ನಡೆಯಾಗಿದೆ. ಆರು ತಿಂಗಳ ಅವಧಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ‘ಸ್ಕಿನ್‌ ಬ್ಯಾಂಕ್‌’ಗೆ ಒಬ್ಬರು ಮಾತ್ರ ಚರ್ಮ ದಾನ ಮಾಡಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ಚರ್ಮದ ಕೊರತೆ ಎದುರಾಗುವ ಸಾಧ್ಯತೆಯಿದೆ.

ಬೆಂಕಿ ಅವಘಡ ಹಾಗೂ ರಸ್ತೆ ಅಪಘಾತಪ್ರಕರಣಗಳ ಗಾಯಾಳುಗಳಿಗೆ ಚರ್ಮ ಕಸಿ ಚಿಕಿತ್ಸೆ ಅಗತ್ಯ.ವ್ಯಕ್ತಿ ಮೃತಪಟ್ಟಾಗ ಕುಟುಂಬಸ್ಥರು ಅಂಗಾಂಗದ ಮಾದರಿಯಲ್ಲಿಯೇ ಚರ್ಮವನ್ನು ಕೂಡ ದಾನ ಮಾಡಬಹುದು. ಆದರೆ, ಚರ್ಮ ನೀಡಲು ದಾನಿಗಳು ಮುಂದೆ ಬಾರದ ಕಾರಣಶೇ 80ರಷ್ಟು ಗಾಯಾಳುಗಳು ಚರ್ಮ ಕಸಿ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಕೋವಿಡ್‌ ನಡುವೆಯೂ ಚರ್ಮ ಬ್ಯಾಂಕಿನ ಸಿಬ್ಬಂದಿ ಚರ್ಮ ಸಂಗ್ರಹದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

2016ರಲ್ಲಿ ಕಾರ್ಯಾರಂಭ ಮಾಡಿರುವ ಈ ‘ಸ್ಕಿನ್‌ ಬ್ಯಾಂಕ್’ ರಾಜ್ಯದ ಏಕೈಕ ಸರ್ಕಾರಿ ಚರ್ಮ ಸಂಗ್ರಹ ಬ್ಯಾಂಕ್ ಎಂಬ ಹಿರಿಮೆ ಭಾಜನವಾಗಿದೆ. ಈವರೆಗೆ 117 ಮೃತ ದಾನಿಗಳಿಂದಚರ್ಮ ಸಂಗ್ರಹಿಸಿ, ಇತರ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಗೆ ನೀಡಿದೆ.ಆರು ತಿಂಗಳಲ್ಲಿ 80 ಮಂದಿ ಈ ಬ್ಯಾಂಕಿನಿಂದ ಚರ್ಮ ಪಡೆದಿದ್ದಾರೆ.ಸದ್ಯ 4 ಸಾವಿರ ಚದರ ಸೆಂ.ಮೀ. ಚರ್ಮ ಮಾತ್ರ ಲಭ್ಯವಿದೆ. ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ ಮಾಡುವುದು ಸ್ಕಿನ್ ಬ್ಯಾಂಕ್‌ಗೆ ಸವಾಲಾಗಿದೆ.

ADVERTISEMENT

ಕೋವಿಡೇತರರಿಂದ ಸಂಗ್ರಹ:‘ಸುಟ್ಟ ಗಾಯ, ರಸ್ತೆ ಅಪಘಾತ ಸೇರಿದಂತೆ ವಿವಿಧ ಸಂದರ್ಭದಲ್ಲಿ ಶೇ 50ಕ್ಕೂ ಅಧಿಕ ಚರ್ಮ ಹಾನಿಯಾದವರು ಚೇತರಿಸಿಕೊಳ್ಳಲು ಚರ್ಮದ ಕಸಿ ಅಗತ್ಯ.ವ್ಯಕ್ತಿ ಮೃತಪಟ್ಟ 6ರಿಂದ 8ಗಂಟೆಯೊಳಗೆ ಚರ್ಮ ಪಡೆದುಕೊಳ್ಳಬೇಕು. ಕೊರೊನಾ ಸೋಂಕಿತ ಮೃತ ವ್ಯಕ್ತಿಗಳಿಂದ ಚರ್ಮ ಸಂಗ್ರಹಿಸಲು ಅವಕಾಶವಿಲ್ಲ. ಚರ್ಮ ದಾನದ ಬಗ್ಗೆ ಬಹುತೇಕರಲ್ಲಿ ತಪ್ಪುಕಲ್ಪನೆಯಿದೆ. ಇದರಿಂದಾಗಿ ಚರ್ಮ ಸಂಗ್ರಹಕ್ಕೆ ಹಿನ್ನಡೆಯಾಗುತ್ತಿದೆ’ ಎಂದುವಿಕ್ಟೋರಿಯಾ ಆಸ್ಪತ್ರೆಯ ಸ್ಕಿನ್‌ ಬ್ಯಾಂಕ್‌ ಮುಖ್ಯಸ್ಥ ಡಾ. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಕಾರಣದಿಂದ ಶಸ್ತ್ರಚಿಕಿತ್ಸೆಗಳು ಕೂಡ ಅಷ್ಟಾಗಿ ನಡೆಯುತ್ತಿಲ್ಲ. ಹೀಗಾಗಿ ಆರು ತಿಂಗಳ ಅವಧಿಯಲ್ಲಿ ಸಂಗ್ರಹವಿದ್ದ ಚರ್ಮವನ್ನು ಅಗತ್ಯ ಇರುವವರಿಗೆ ಒದಗಿಸಲಾಗಿದೆ. ಕೋವಿಡೇತರ ಕಾಯಿಲೆಗಳಿಂದ ಮೃತಪಟ್ಟವರಿಗೆ ಯಾವುದೇ ಪರೀಕ್ಷೆ ನಡೆಸದೆಯೇ ಚರ್ಮ ಪಡೆದುಕೊಳ್ಳಲಾಗುತ್ತದೆ. ಸೋಂಕಿನ ಶಂಕೆ ಇದ್ದಲ್ಲಿ ಮಾತ್ರ ಪರೀಕ್ಷೆ ನಡೆಸಿ, ಚರ್ಮ ಪಡೆದುಕೊಳ್ಳುತ್ತಿದ್ದೇವೆ. ಕೆಲ ದಿನಗಳಿಂದ ಸಂಸ್ಥೆಯ ಕೆಲ ಸಿಬ್ಬಂದಿ ಸಹ ಕೋವಿಡ್‌ ಕಾರ್ಯದಲ್ಲಿ ನಿರತರಾಗಿದ್ದರು. ಇನ್ನುಮುಂದೆ ನಮ್ಮ ಎಲ್ಲ ಸಿಬ್ಬಂದಿ ಸ್ಕಿನ್‌ ಬ್ಯಾಂಕ್ ಕಾರ್ಯದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದರು.

18 ವರ್ಷ ಮೇಲ್ಪಟ್ಟ ವ್ಯಕ್ತಿ ಅರ್ಹ

18 ವರ್ಷ ದಾಟಿದ ವ್ಯಕ್ತಿ ಮರಣ ಹೊಂದಿದ ಬಳಿಕ ಕುಟುಂಬದ ಒಪ್ಪಿಗೆ ಪಡೆದು ಚರ್ಮ ಪಡೆಯಲಾಗುತ್ತದೆ. ದಾನಿಯು ಎಚ್ಐವಿ, ಎಚ್‌ಸಿವಿ, ಕ್ಯಾನ್ಸರ್‌ ಪೀಡಿತರಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಅಗತ್ಯ ಇರುವವರಿಗೆ ಚರ್ಮ ನೀಡಲಾಗುತ್ತದೆ.ವೈದ್ಯಕೀಯ ಉಪಕರಣದ ಸಹಾಯದಿಂದ ರಕ್ತಸ್ರಾವ ಆಗದ ರೀತಿಯಲ್ಲಿ ಚರ್ಮದ ಮೇಲ್ಪದರವನ್ನು ಮಾತ್ರ ತೆಗೆದು, ಬ್ಯಾಂಡೇಜ್ ಮಾಡಲಾಗುತ್ತದೆ. ಸಂಸ್ಕರಿಸಿದ ಚರ್ಮವನ್ನು 5 ವರ್ಷದವರೆಗೂ ಶೇಖರಣೆ ಮಾಡಬಹುದು ಎನ್ನುತ್ತಾರೆ ಚರ್ಮ ಬ್ಯಾಂಕಿನ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.