ADVERTISEMENT

ಹೊಸ ಬಜೆಟ್‌, ನೂತನ ಯೋಜನೆ ಇಲ್ಲ

ಬಿಎಸ್‌ವೈ ಕನಸಿಗೆ ಅತಿವೃಷ್ಟಿ ಅಡ್ಡಿ l ಅಕ್ಟೋಬರ್‌ನಲ್ಲಿ ಪೂರಕ ಅಂದಾಜಿಗೆ ಒಪ್ಪಿಗೆ

ಎಸ್.ರವಿಪ್ರಕಾಶ್
Published 11 ಸೆಪ್ಟೆಂಬರ್ 2019, 19:58 IST
Last Updated 11 ಸೆಪ್ಟೆಂಬರ್ 2019, 19:58 IST
.
.   

ಬೆಂಗಳೂರು: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಠಿಣ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವ ಕಾರಣ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಘೋಷಿಸದೇ ಪೂರಕ ಅನುದಾನಕ್ಕೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿಯಾಗಿ ವಿಶ್ವಾಸಮತ ಗೆದ್ದ ಬಳಿಕ ಮೂರು ತಿಂಗಳ ಅವಧಿಗೆ ಲೇಖಾನುದಾನ ಪಡೆದಿದ್ದರು. ಮೂರು ತಿಂಗಳ ಬಳಿಕ ಹೊಸ ಬಜೆಟ್‌ ಮಂಡಿಸುವುದಾಗಿ ಪ್ರಕಟಿಸಿದ್ದರು.

ಆದರೆ, ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಹೊಸ ಕಾರ್ಯಕ್ರಮ ಅಥವಾ ಯೋಜನೆಗಳನ್ನು ಪ್ರಕಟಿಸಿದರೆ, ಅದನ್ನು ಅನುಷ್ಠಾನಗೊಳಿಸಲು ಕನಿಷ್ಠ ಎರಡರಿಂದ ಮೂರು ತಿಂಗಳಾದರೂ ಬೇಕು. ಅಷ್ಟರಲ್ಲೇ ಹೊಸ ಬಜೆಟ್‌ ತಯಾರಿಸಲು ಸಿದ್ಧಗೊಳ್ಳಬೇಕಾಗುತ್ತದೆ. ಅದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂಬುದಾಗಿ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಡಿಸಿದ್ದ ಬಜೆಟ್‌ ಮುಂದುವರಿಯಲಿದೆ. ಹೆಚ್ಚುವರಿಯಾಗಿ ಆಗುವ ವೆಚ್ಚಕ್ಕೆ ಪೂರಕ ಅಂದಾಜು ಮಂಡಿಸಿ ಯಡಿಯೂರಪ್ಪ ಅವರು ಸದನದ ಒಪ್ಪಿಗೆ ಪಡೆಯಲಿದ್ದಾರೆ.

ಅಕ್ಟೋಬರ್‌ 31 ಕ್ಕೆ ಲೇಖಾನುದಾನದ ಅವಧಿ ಮುಗಿಯಲಿದ್ದು, ವಿಧಾನಮಂಡಲ ಅಧಿವೇಶನ ಕರೆದು ಹೊಸ ಬಜೆಟ್‌ ಮಂಡಿಸಬೇಕು ಅಥವಾ ಹಿಂದೆ ಮಂಡಿಸಲಾಗಿದ್ದ ಬಜೆಟ್‌ಗೆ ಒಪ್ಪಿಗೆ‍ಪಡೆಯಬೇಕು. ಮುಖ್ಯಮಂತ್ರಿಯವರು ಅಧಿಕಾರಿಗಳ ಜತೆ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಬಳಿಕ ಹೊಸ ಬಜೆಟ್ ಮಂಡಿಸದೇ ಇರುವ ತೀರ್ಮಾನಕ್ಕೆ ಬಂದಿದ್ದಾರೆ.

ಕಠಿಣವಿದ್ದರೂ, ಆರ್ಥಿಕ ಶಿಸ್ತು ಇದೆ: ‘ರಾಜ್ಯದಲ್ಲಿ ಯಾವುದೇ ಯೋಜನೆಗಳಿಗೆ ಖರ್ಚು ಮಾಡಲು ಸರ್ಕಾರದ ಬಳಿ ಹಣವೇ ಇಲ್ಲ ಎಂಬ ಮಾಹಿತಿ ಸರಿಯಲ್ಲ. ಹಿಂದಿನ ಸರ್ಕಾರ ಬಜೆಟ್‌ ಮಾಡಿಸಿದಾಗ ಬೇರೆ ಯೋಜನೆಗಳು ಮತ್ತು ಇಲಾಖೆಗಳಿಗೆ ಹಣ ನಿಗದಿ ಮಾಡಿತ್ತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹೊಸ್ತಿಲಿನಲ್ಲೇ ಭೀಕರ ಪ್ರವಾಹ ಬಂದಿತು. ಇದರಿಂದ ಸಂತ್ರಸ್ತರಾದವರಿಗೆ ಪರಿಹಾರ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕಾಗಿದೆ’ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತುರ್ತು ಪರಿಹಾರ ಕಾರ್ಯಕ್ಕಾಗಿ ಹಣ ಹೊಂದಿಸಲು ಲೋಕೋಪಯೋಗಿ ಇಲಾಖೆಯೂ ಸೇರಿ ವಿವಿಧ ಇಲಾಖೆಗಳ ಬೇರೆ ಬೇರೆ ಯೋಜನೆ ಅಥವಾ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಮತ್ತು ಬಳಕೆಯಾಗದ ಹಣವನ್ನು ಪಡೆದು, ಪರಿಹಾರಕ್ಕೆ ಬಳಸುತ್ತಿದ್ದೇವೆ. ಹಿಂದೆಯೂ ಇದೇ ವಿಧಾನವನ್ನು ಅನುಸರಿಸಲಾಗಿದೆ. ಒಮ್ಮೆ ಹೊಸ ಬಜೆಟ್‌ ಅಥವಾ ಪೂರಕ ಅಂದಾಜು ಮಂಡಿಸಿದ ಬಳಿಕ ಆ ಹಣವನ್ನು ಆಯಾ ಇಲಾಖೆಗೆ ಮರಳಿಸಲಾಗುವುದು ಎಂದು ಅವರು ವಿವರಿಸಿದರು.

ಆರ್ಥಿಕ ಹಿಂಜರಿತದಿಂದ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಖರೀದಿ ಮಾಡುವುದನ್ನೇ ಕಡಿಮೆ ಮಾಡಿರುವುದರಿಂದ ಜಿಎಸ್‌ಟಿ ಸಂಗ್ರಹವೂ ಕಡಿಮೆ ಆಗಿದೆ. ಖರೀದಿ ಹೆಚ್ಚಿದರೆ, ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತದೆ. ಇವೆಲ್ಲದರ ಕಾರಣ ಆರ್ಥಿಕ ಸ್ಥಿತಿ ಕಠಿಣವಾಗಿದೆ. ಆದರೆ, ತ್ರೈಮಾಸಿಕ ಆರ್ಥಿಕ ಸ್ಥಿತಿ ಕಳೆದ ವರ್ಷಕ್ಕಿಂತಲೂ ಕೊಂಚ ಉತ್ತಮವಾಗಿದೆ ಎಂದು ಅವರು ಹೇಳಿದರು.

ಆರ್ಥಿಕ ಹಿಂಜರಿತದಿಂದ ತೆರಿಗೆ ಸಂಗ್ರಹ ಹಿನ್ನಡೆ: ಬಿಎಸ್‌ವೈ

ಬೆಂಗಳೂರು: ‘ಆರ್ಥಿಕ ಹಿಂಜರಿತದಿಂದಾಗಿ ತೆರಿಗೆ ಸಂಗ್ರಹದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಿದ್ದರೂ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದ್ದೇವೆ’ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬುಧವಾರ ನಡೆದ ವಾಣಿಜ್ಯ, ಅಬಕಾರಿ, ನೋಂದಣಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು,ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಿತ ಸಂಗ್ರಹಣೆ ಗುರಿಯ ಶೇ 44.2ರಷ್ಟು ತೆರಿಗೆ ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಕರ ಸಂಗ್ರಹದ ಬೆಳವಣಿಗೆ ಶೇ 14.16 ರಷ್ಟಿದೆ ಎಂದರು.

‘ಬೆಳವಣಿಗೆ ದರ ಏರುಗತಿಯಲ್ಲಿ ಸಾಗಲು ಎಲ್ಲ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಎಸ್‍ಟಿ ಸಂರಕ್ಷಿತ ತೆರಿಗೆ ಮತ್ತು ವಾಸ್ತವ ತೆರಿಗೆ ಸಂಗ್ರಹದ ನಡುವಿನ ಅಂತರ ಕಡಿಮೆಗೊಳಿಸಲು ಶ್ರಮಿಸಬೇಕು ಎಂದು ಸೂಚಿಸಿದ್ದೇನೆ’ ಎಂದು ಹೇಳಿದರು.

‘ಜಿಎಸ್‍ಟಿ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ 64 ಸಾವಿರಕ್ಕೂ ಹೆಚ್ಚು ಪರವಾನಗಿಗಳನ್ನು ರದ್ದುಪಡಿಸಲಾಗಿದೆ.
ನಿಯಮಿತ ತಪಾಸಣೆ, ಫಾಲೋಅಪ್‍ಗಳ ಜೊತೆಗೆ ಇ-ವೇ ಬಿಲ್‌ ತಪಾಸಣೆಯನ್ನೂ ಕಟ್ಟುನಿಟ್ಟಾಗಿ ನಡೆಸುವ ಮೂಲಕ, ತೆರಿಗೆ ಸಂಗ್ರಹಣೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ಮರಳು ಮಾಫಿಯಾ ಮಟ್ಟ ಹಾಕಿ’

ರಾಜ್ಯದಲ್ಲಿನ ಮರಳು ಮಾಫಿಯಾ ಮಟ್ಟಹಾಕುವಂತೆ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಮರಳು ಮಾಫಿಯಾವನ್ನು ಯಾರೇ ನಡೆಸುತ್ತಿರಲಿ. ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಿ. ರಾಜಕೀಯ ಪ್ರಭಾವ ಅಥವಾ ಒತ್ತಡಗಳಿಗೆ ಮಣಿಯಬೇಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

‘ಜನಸಾಮಾನ್ಯರಿಗೆ ಸುಲಭ ದರದಲ್ಲಿ ಮರಳು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.