ADVERTISEMENT

ಒಂದಕ್ಕಿಂತ ಹೆಚ್ಚು ಪದವಿ ಪಡೆದ ಪರಿಶಿಷ್ಟರಿಗಿಲ್ಲ ಹಾಸ್ಟೆಲ್‌: ಬೆಂಗಳೂರು ವಿವಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 18:08 IST
Last Updated 3 ಡಿಸೆಂಬರ್ 2022, 18:08 IST
   

ಬೆಂಗಳೂರು: ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳು 2022–23ನೇ ಸಾಲಿನಲ್ಲಿ ಮತ್ತೊಂದು ಪದವಿಗೆ ಪ್ರವೇಶ ಬಯಸಿದರೆ ಅಂಥವರಿಗೆ ಹಾಸ್ಟೆಲ್‌ಗೆ ಪ್ರವೇಶ ನೀಡಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.

ಈ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಪ್ರವೇಶ ನೀಡುವ ಸಮಯದಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು. ಮೊದಲ ಪದವಿಯೇ, ಎರಡನೇ ಬಾರಿ ಪದವಿಗೆ ಪ್ರವೇಶ ಪಡೆಯುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮುಚ್ಚಳಿಕೆ ಪಡೆದು ಪ್ರವೇಶ ನೀಡಬೇಕು ಎಂದು ಕಲಸಚಿವರು ಸೂಚಿಸಿದ್ದಾರೆ.

ಕಾಂಗ್ರೆಸ್‌ ಆಕ್ರೋಶ: ಉನ್ನತ ಶಿಕ್ಷಣ ಸಚಿವರ ಸೂಚನೆಯಂತೆ ಸುತ್ತೋಲೆ ಹೊರಡಿಸಲಾಗಿದೆ. ಇಂತಹ ನಡೆ ಬಿಜೆಪಿಯ ದಲಿತ ವಿರೋಧಿ ಹಾಗೂ ದಲಿತರ ಶಿಕ್ಷಣಕ್ಕೆ ಅಡ್ಡಿಪಡಿಸುವ ಮನೋಸ್ಥಿತಿಯ ಗುಪ್ತ ಕಾರ್ಯಸೂಚಿ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಶತ ಶತಮಾನಗಳಿಂದ ಶೋಷಣೆ ಮತ್ತು ತುಳಿತಕ್ಕೆ ಒಳಗಾಗಿರುವ ದಲಿತ ಸಮುದಾಯದಲ್ಲಿ ಇಂದಿಗೂ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆ. ಸರ್ಕಾರದ ಬೆಂಬಲ, ಸಹಾಯದ ಮಧ್ಯೆಯೂ ಸ್ನಾತಕೋತ್ತರಶಿಕ್ಷಣ ಪಡೆಯಲು ಮುಂದೆ ಬರುತ್ತಿಲ್ಲ. ಇಂತಹ ಸಮಯದಲ್ಲಿ ವಿಶ್ವವಿದ್ಯಾಲಯ ಹೊರಡಿಸಿದ ಸುತ್ತೋಲೆ ಶಿಕ್ಷಣಕ್ಕೆ ಮಾರಕ’ ಎಂದು ದೂರಿದ್ದಾರೆ.

‘ಕೂಡಲೇ ಸುತ್ತೋಲೆ ಹಿಂದಕ್ಕೆ ಪಡೆಯಬೇಕು. ಬಿಜೆಪಿ ಹಾಗೂ ರಾಜ್ಯ ಸರ್ಕಾರ ಪರಿಶಿಷ್ಟರ ದಮನಕಾರಿ ನೀತಿ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.