ADVERTISEMENT

ವಿದ್ಯುತ್‌ ಬಿಲ್ ಪಾವತಿಗೆ ಆರು ತಿಂಗಳ ಕಾಲಾವಕಾಶ ಇದೆಯಾ। ಬೆಸ್ಕಾಂ ಸ್ಪಷ್ಟನೆ ಏನು?

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 14:22 IST
Last Updated 7 ಜುಲೈ 2022, 14:22 IST
ಬೆಸ್ಕಾಂ
ಬೆಸ್ಕಾಂ    

ಬೆಂಗಳೂರು: ವಿದ್ಯುತ್‌ ಶುಲ್ಕ ಪಾವತಿಗೆ ಬಿಲ್‌ ನೀಡಿದ ದಿನದಿಂದ ಆರು ತಿಂಗಳು ಕಾಲಾವಕಾಶವಿರುತ್ತದೆ ಎನ್ನುವ ಸುಳ್ಳು ಮಾಹಿತಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಕಾಲಕಾಲಕ್ಕೆ ಅನುಮೋದಿಸುವ ದರದಲ್ಲಿ ಗ್ರಾಹಕರು ಬಳಸುವ ವಿದ್ಯುತ್‌ಗೆ ಬೆಸ್ಕಾಂ ಶುಲ್ಕ ಪಡೆಯುತ್ತಿದೆ. ಬಿಲ್‌ ನೀಡಿದ ದಿನದಿಂದ ಪಾವತಿಸಲು 15 ದಿನಗಳ ಕಾಲಾವಕಾಶವಿರುತ್ತದೆ ಎಂದು ತಿಳಿಸಿದೆ.

ಗ್ರಾಹಕರಿಗೆ ನೀಡುವ ಮಾಸಿಕ ಬಿಲ್‌ನ ಹಿಂಬದಿ ಸೂಚನೆಯಲ್ಲಿ ಅಂತಿಮ ಗಡುವು, ಬಿಲ್‌ ವಿತರಿಸಿದ ದಿನದಿಂದ 15 ದಿನಗಳ ಅವಧಿಯಾಗಿರುತ್ತದೆ ಎಂದು ನಮೂದಿಸಲಾಗಿದೆ. ನಿಗದಿತ ಅವಧಿ ಒಳಗೆ ಹಣ ಪಾವತಿಸದಿದ್ದಲ್ಲಿ, ಗಡುವು ದಿನಾಂಕದ ನಂತರ 15 ದಿನಗಳ ಕಾಲಾವಧಿಯ ನೋಟಿಸ್‌ ಜಾರಿ ಮಾಡಲಾಗುತ್ತದೆ. ಬಾಕಿ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುವ ಅಧಿಕಾರವನ್ನು ಬೆಸ್ಕಾಂ ಹೊಂದಿರುತ್ತದೆಎಂದುನಿರ್ದೇಶಕರು (ಹಣಕಾಸು) ಸ್ಪಷ್ಟಪಡಿಸಿದ್ದಾರೆ.

ADVERTISEMENT

ಬಿಲ್‌ ವಿತರಿಸಿದ ದಿನಾಂಕದಿಂದ 15 ದಿನಗಳೊಳಗೆ ಬಿಲ್‌ ಮೊತ್ತವನ್ನು ಗ್ರಾಹಕರು ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್ , ಬೆಸ್ಕಾಂ ಮಿತ್ರ ಆ್ಯಪ್ ಅಥವಾ ಹತ್ತಿರದ ಬೆಸ್ಕಾಂ ಕಚೇರಿ, ಬೆಸ್ಕಾಂ ವೆಬ್‌ಸೈಟ್ ಮತ್ತು ಗೂಗಲ್ ಆ್ಯಪ್‌ಗಳಲ್ಲಿ ಮಾತ್ರ ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

‘ವ್ಯಕ್ತಿಯೊಬ್ಬ ತಪ್ಪುಮಾಹಿತಿಯವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಕುರಿತು ಬೆಸ್ಕಾಂ ಜಾಗೃತದಳಕ್ಕೆ ಮಾಹಿತಿ ನೀಡಿದ್ದು, ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ದೂರು ನೀಡಿ: ವದಂತಿಗಳ ಬಗ್ಗೆ ಕಿವಿಗೊಡಬೇಡಿ. ತಪ್ಪು ಮಾಹಿತಿ ನೀಡುತ್ತಿರುವವರ ಬಗ್ಗೆ ಬೆಸ್ಕಾಂ ಜಾಗೃತ ದಳದಸೂಪರಿಟೆಂಡೆಂಟ್ (ದೂರವಾಣಿ ಸಂಖ್ಯೆ:9448042375) ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ (9448094802) ಅವರಿಗೆ ಮಾಹಿತಿ ನೀಡಲು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.

ಆನ್‌ ಲೈನ್‌ ವಂಚನೆ:ಕೆಲವರು ಬೆಸ್ಕಾಂ ಗ್ರಾಹಕರಿಗೆ ಆನ್‌ಲೈನ್‌ ಮೂಲಕ ವಂಚಿಸುತ್ತಿರುವುದು ಸಹ ಗೊತ್ತಾಗಿದೆ.

ಬಿಲ್‌ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಸ್ಎಂ‌ಎಸ್‌ ಕಳುಹಿಸಿ ವಂಚಿಸುವ ಆನ್‌ಲೈನ್‌ ವಂಚಿಸುವವರ ಜಾಲದ ಬಗ್ಗೆ ಎಚ್ಚರ ವಹಿಸುವಂತೆ ಬೆಸ್ಕಾಂ ಕೋರಿದೆ.

ಗ್ರಾಹಕರಿಗೆ ಕರೆ ಮಾಡಿ ತಾವು ಸೂಚಿಸುವ ಮೊಬೈಲ್‌ ಸಂಖ್ಯೆಗೆಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ವಿದ್ಯುತ್ ಶುಲ್ಕ ಪಾವತಿಸಲು ಸೂಚಿಸುತ್ತಿದ್ದಾರೆ. ಇಂತಹ ಯಾವುದೇ ಬಿಲ್ ಪಾವತಿಸುವ ವ್ಯವಸ್ಥೆ ಬೆಸ್ಕಾಂನಲ್ಲಿ ಇಲ್ಲ. ಅಲ್ಲದೆ ಗಾಹಕರಿಗೆ ಬೆಸ್ಕಾಂ ಬಿಲ್‌ ಪಾವತಿಸುವ ಕುರಿತಂತೆ ಯಾವುದೇ ಸಂದೇಶ ಅಥವಾ ದೂರವಾಣಿ ಕರೆ ಮಾಡುವುದಿಲ್ಲ. ಗ್ರಾಹಕರು ಇಂತಹ ಕರೆಗಳು ಬಂದ ತಕ್ಷಣ ಸಹಾಯವಾಣಿ 1912 ಗೆ ಮಾಹಿತಿ ನೀಡಲು ಬೆಸ್ಕಾಂ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.