ADVERTISEMENT

ಪುನೀತ್ ರಾಜಕುಮಾರ್ ಪ್ರೇರಣೆ: 150 ಜನರಿಂದ ಅಂಗಾಂಗ ದಾನ ಪ್ರತಿಜ್ಞೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 2:45 IST
Last Updated 3 ಫೆಬ್ರುವರಿ 2023, 2:45 IST
   

ಬೆಂಗಳೂರು: ಎನ್‌ಯು ಆಸ್ಪತ್ರೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡ ಅಂಗಾಂಗ ದಾನ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಮಂದಿ ಅಂಗಾಂಗ ದಾನದ ಪ್ರತಿಜ್ಞೆ ಕೈಗೊಂಡರು.

ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಆಸ್ಪತ್ರೆಯು ಈ ಕಾರ್ಯಕ್ರಮ ಆಯೋಜಿಸಿತ್ತು. ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಂದ ಪ್ರೇರಣೆ ಪಡೆದು, ಹಲವರು ಅಂಗಾಂಗ ದಾನದ ಪ್ರತಿಜ್ಞೆ ಮಾಡಿದರು.

ಆಸ್ಪತ್ರೆಯ ವೈದ್ಯಕೀಯ ಸಮೂಹದ ನಿರ್ದೇಶಕ ಡಾ. ದಿಲೀಪ್ ರಂಗರಾಜನ್, ‘ಅಂಗಾಂಗ ದಾನಕ್ಕೆ ಕಾಯುವ ರೋಗಿಗಳ ಪಟ್ಟಿ ಬೆಳೆಯುತ್ತಿದೆ. ಅಂಗಾಂಗ ದಾನಕ್ಕೆ ಉತ್ತೇಜನ ನೀಡುವುದು ಇಂದಿನ ಅಗತ್ಯ. ಮೂತ್ರ‍ಪಿಂಡ ವೈಫಲ್ಯಕ್ಕೆ ಒಳಗಾದವರಿಗೆ ಅಂಗಾಂಗ ಕಸಿಯು ಡಯಾಲಿಸಿಸ್ ಮೇಲಿನ ಅವಲಂಬನೆ ತಪ್ಪಿಸಲಿದೆ. ಅಂಗಾಂಗ ದಾನವನ್ನು ಉತ್ತೇಜಿಸಲು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ADVERTISEMENT

ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (ಸೊಟ್ಟೊ) ಕಸಿ ಸಂಯೋಜಕ, ‘ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಹೃದಯ, ಮೂತ್ರಪಿಂಡ, ಶ್ವಾಸಕೋಶ ಸೇರಿ ವಿವಿಧ ಅಂಗಾಂಗಗಳು, ಹೃದಯದ ಕವಾಟ, ಚರ್ಮ, ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳನ್ನು ದಾನವಾಗಿ ಸ್ವೀಕರಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.