ಯಲಹಂಕ: ರಾಜಾನುಕುಂಟೆ ಗ್ರಾಮ ಪಂಚಾಯಿತಿ ಸಭೆಗೆ ಹಾಜರಾಗದ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜಾನುಕುಂಟೆ ಗ್ರಾಮಪಂಚಾಯಿತಿಯ 2024–25ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮಸಭೆಯಲ್ಲಿ ಸಾರ್ವಜನಿಕರು ಮತ್ತು ರೈತರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಚರ್ಚೆಯಾಗುತ್ತವೆ. ಅವುಗಳಿಗೆ ಸೂಕ್ತಪರಿಹಾರ ನೀಡಲು ಕಂದಾಯ ಇಲಾಖೆಯ ಅಧಿಕಾರಿಗಳ ಹಾಜರಾತಿ ಅತ್ಯಗತ್ಯ. ಆದರೆ, ಹಿರಿಯ ಅಧಿಕಾರಿಗಳ ಕುಂಟುನೆಪಗಳನ್ನು ಹೇಳಿ ಗ್ರಾಮಸಭೆಗಳಿಗೆ ಗೈರಾಗಿ, ನೆಪಮಾತ್ರಕ್ಕೆ ತಮ್ಮ ಸಿಬ್ಬಂದಿಯನ್ನು ಪ್ರತಿನಿಧಿಗಳನ್ನಾಗಿ ಕಳುಹಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸವಲತ್ತುಗಳ ವಿತರಣೆ: ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ, ಅಂಗವಿಕಲರಿಗೆ ಸಹಾಯಧನದ ಚೆಕ್, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ ಮತ್ತು ಕ್ರೀಡಾ ಸಾಮಗ್ರಿಗಳ ಕಿಟ್ ವಿತರಿಸಿದರು. ಎಸ್.ಎಸ್.ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ನೀಡಿದರು.
ರಾಜಾನುಕುಂಟೆ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ನಾಲ್ಕು ನೂತನ ಕೊಠಡಿಗಳನ್ನು ಉದ್ಘಾಟಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಎಲ್.ಕೆಜಿ)ಆಂಗ್ಲಮಾಧ್ಯಮ ತರಗತಿಗೆ ಚಾಲನೆನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಪಟಾಲಪ್ಪ, ಉಪಾಧ್ಯಕ್ಷ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ, ಅಂಬಿಕಾ ರಾಜೇಂದ್ರಕುಮಾರ್, ಕೆ.ವೀರಣ್ಣ, ಪಿಡಿಒ ನಾಗರಾಜ್, ಕಾರ್ಯದರ್ಶಿ ರಾಕೇಶ್, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಅದ್ದೆ ವಿಶ್ವನಾಥಪುರ ಮಂಜುನಾಥ್, ಎಂ. ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.