ADVERTISEMENT

ಕೈಗೆ ಸಿಗದ ಒಲಾ, ಉಬರ್ ಸಿಬ್ಬಂದಿ: ಚಾಲಕರಿಗೆ ದಂಡ

ಪರವಾನಗಿ ಅವಧಿ ಮುಗಿದರೂ ನವೀಕರಣ ಮಾಡಿಸಿಕೊಳ್ಳದ ಕಂಪನಿಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 19:26 IST
Last Updated 31 ಜನವರಿ 2022, 19:26 IST

ಬೆಂಗಳೂರು: ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿರುವ ಒಲಾ ಮತ್ತು ಉಬರ್ ಸಂಸ್ಥೆಗಳ ಪರವಾನಗಿ ಅವಧಿ ಮುಗಿದಿದ್ದರೂ ನವೀಕರಣ ಮಾಡಿಕೊಳ್ಳದಿರುವುದು ಚಾಲಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಂಪನಿಯ ಸಿಬ್ಬಂದಿ ಹುಡುಕಿ ಸುಸ್ತಾಗಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಈಗ ಕಾರುಗಳನ್ನು ಅಡ್ಡಗಟ್ಟಿ ದಂಡ ವಿಧಿಸುವ ಕಾರ್ಯ ಆರಂಭಿಸಿದ್ದಾರೆ.

ಒಲಾ ಕಂಪನಿಗೆ ನೀಡಿದ್ದ ಪರವಾನಗಿ ಕಳೆದ ಫೆಬ್ರುವರಿಯಲ್ಲಿ ಮುಗಿದಿದ್ದು, ಉಬರ್ ಕಂಪನಿಯ ಪರವಾನಗಿ ಅವಧಿ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡಿದೆ. ಶುಲ್ಕ ಪಾವತಿಸಿ ನವೀಕರಣ ಮಾಡಿಕೊಳ್ಳದೆ ಎರಡೂ ಕಂಪನಿಗಳು ಸೇವೆ ಮುಂದುವರಿಸಿವೆ.

ಕಂಪನಿಗಳ ಕಚೇರಿಗಳಿಗೆ ನೋಟಿಸ್
ಕಳಿಸಿದ್ದರೂ ಉತ್ತರಗಳು ಬಂದಿಲ್ಲ. ಕೋವಿಡ್ ಬಳಿಕ ಸಿಬ್ಬಂದಿ ಮನೆ
ಯಿಂದಲೇ ಕೆಲಸ ಮಾಡುತ್ತಿರುವುದರಿಂದ ಸಾರಿಗೆ ಇಲಾಖೆ ಅಧಿಕಾರಿಗಳ ಕೈಗೆ ಎರಡೂ ಕಂಪನಿಗೆ ಸಂಬಂಧಿಸಿದವರು ಸಿಗುತ್ತಿಲ್ಲ. ಆದ್ದರಿಂದ ಕಾರುಗಳನ್ನು ಅಡ್ಡಗಟ್ಟಿ ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿದ್ದರೆ ಅಂತಹ ಚಾಲಕರಿಗೆ ದಂಡ ವಿಧಿಸುವ ಕಾರ್ಯವನ್ನು ಸಾರಿಗೆ ಇಲಾಖೆ ಮಾಡುತ್ತಿದೆ.

ADVERTISEMENT

ಪರವಾನಗಿ ಇಲ್ಲದೆ ಸೇವೆ ಒದಗಿಸುವುದು ಕಾನೂನು ಬಾಹಿರ. ಆದ್ದರಿಂದ ದಂಡ ವಿಧಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಪರವಾನಗಿ ನವೀಕರಣ ಮಾಡಿಸಿಕೊಳ್ಳದ ಕಂಪನಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವ ಬದಲು ಅಮಾಯಕ ಚಾಲಕರಿಗೆ ತೊಂದರೆ ನೀಡುತ್ತಿರುವುದು ಎಷ್ಟು ಸರಿ ಎಂಬುದು ಟ್ಯಾಕ್ಸಿ ಚಾಲಕರ ಪ್ರಶ್ನೆ.

‘ಕಂಪನಿಯ ಸಿಇಒಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿ
ಸಲು ಅವಕಾಶ ಇದೆ. ಆ್ಯಪ್‌ಗಳು ಕಾರ್ಯ
ನಿರ್ವಹಿಸದಂತೆ ಬಂದ್ ಮಾಡಲು ಸರ್ಕಾರಕ್ಕೆ ಅವಕಾಶ ಇದೆ. ಅದನ್ನು ಮಾಡದೆ ಚಾಲಕರಿಗೆ ದಂಡ ವಿಧಿಸಿದರೆ ಏನು ಪ್ರಯೋಜನ. ಗುಬ್ಬಿಗಳ ಮೇಲೆ
ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗ ಮಾಡು
ತ್ತಿದೆ’ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದರು.

‘ದಿನವಿಡೀ ಕಾರು ಚಾಲನೆ ಮಾಡಿ ದುಡಿದಿದ್ದ ಹಣವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ದಂಡವಾಗಿ ವಸೂಲಿ ಮಾಡಿದರೆ, ಚಾಲಕರು ಏನು ಮಾಡಬೇಕು. ಚಾಲಕರಿಗೆ ದಂಡ ವಿಧಿಸದೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.