ADVERTISEMENT

‘ಓಎಲ್‌ಎಕ್ಸ್‌’ ವಂಚನೆಗೆ ಸೈನಿಕರ ದಾಖಲೆ ಬಳಕೆ

ಬೈಕ್, ಕಾರು ಮಾರಾಟಕ್ಕಾಗಿ ಜಾಲತಾಣಗಳಲ್ಲಿ ಜಾಹೀರಾತು * ಹಣ ಪಡೆದು ವಂಚಿಸುತ್ತಿರುವ ಖದೀಮರು

ಸಂತೋಷ ಜಿಗಳಿಕೊಪ್ಪ
Published 15 ನವೆಂಬರ್ 2018, 19:21 IST
Last Updated 15 ನವೆಂಬರ್ 2018, 19:21 IST
   

ಬೆಂಗಳೂರು: ಇದುವರೆಗೂ ಅಮಾಯಕ ಜನರು ಹಾಗೂ ಕೆಲವು ಅಧಿಕಾರಿಗಳ ದಾಖಲೆಗಳನ್ನು ಬಳಸಿಕೊಂಡು ಆನ್‌ಲೈನ್‌ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದ ಖದೀಮರು, ಇದೀಗ ಸೈನಿಕರು ಹಾಗೂ ಸೇನಾಧಿಕಾರಿಗಳ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಗ್ರಾಹಕರನ್ನು ವಂಚಿಸುತ್ತಿದ್ದಾರೆ.

ಸೈನಿಕರು ಮತ್ತು ಸೇನಾಧಿಕಾರಿ ಹೆಸರಿನಲ್ಲಿಬೈಕ್‌ ಹಾಗೂ ಕಾರು ಮಾರಾಟ ಮಾಡುವುದಾಗಿ ಹೇಳಿ ‘ಓಎಲ್‌ಎಕ್ಸ್‌’ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸುತ್ತಿರುವ ಖದೀಮರು, ವಾಹನಗಳ ಖರೀದಿಗೆ ಆಸಕ್ತಿ ತೋರಿಸುವ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡು ಮಾಯವಾಗುತ್ತಿದ್ದಾರೆ.

ಇಂಥ ಖದೀಮರಿಂದ ವಂಚನಗೀಡಾದ ಬೆಂಗಳೂರಿನ 10 ಗ್ರಾಹಕರು, ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ತಮಗೆ ಕಳುಹಿಸಿದ್ದರು ಎನ್ನಲಾದ ಸೈನಿಕರು ಹಾಗೂ ಸೇನಾಧಿಕಾರಿಗಳ ದಾಖಲೆಗಳನ್ನೂ ದೂರಿನೊಂದಿಗೆ ಲಗತ್ತಿಸಿದ್ದಾರೆ.

ADVERTISEMENT

‘ಖದೀಮರು, 10 ಗ್ರಾಹಕರಿಂದಲೂ ತಲಾ ₹50 ಸಾವಿರದಿಂದ ₹80 ಸಾವಿರದವರೆಗೆ ಹಣ ಪಡೆದುಕೊಂಡಿದ್ದಾರೆ. ಬೈಕ್‌ ಹಾಗೂ ಕಾರು ನೀಡದೇ ಹಣವನ್ನೂ ವಾಪಸ್‌ ಕೊಡದೇ ವಂಚಿಸಿದ್ದಾರೆ. ಮೊಬೈಲ್ ನಂಬರ್ ಹಾಗೂ ಬ್ಯಾಂಕ್‌ ಖಾತೆಗಳ ವಿವರ ಸಂಗ್ರಹಿಸಿ, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸೈಬರ್ ಕ್ರೈಂ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

ವಾಟ್ಸ್‌ಆ್ಯಪ್‌ಗೆ ದಾಖಲೆ ಕಳುಹಿಸುತ್ತಿದ್ದರು: ‘ರಾಯಲ್ ಎನ್‌ಫೀಲ್ಡ್‌, ಯಮಹಾ ಕಂಪನಿಯ ದುಬಾರಿ ಬೆಲೆಯ ಬೈಕ್‌ಗಳ ಫೋಟೊಗಳನ್ನು ಆರೋಪಿಗಳು ಜಾಹೀರಾತಿನೊಂದಿಗೆ ಪ್ರಕಟಿಸಿದ್ದರು. ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿ ಗ್ರಾಹಕರನ್ನು ತಮ್ಮತ್ತ ಸೆಳೆದಿದ್ದರು’ ಎಂದು ಅಧಿಕಾರಿ ಹೇಳಿದರು.

‘ಜಾಹೀರಾತು ನಿಜವೆಂದು ನಂಬಿದ್ದ ಗ್ರಾಹಕರು, ಆರೋಪಿಗಳ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದ್ದರು. ‘ನಾನು ಸೈನಿಕ. ಹೊಸ ಕಾರು ತೆಗೆದುಕೊಳ್ಳುತ್ತಿದ್ದೇನೆ. ಹೀಗಾಗಿ, ನನ್ನ ಬೈಕ್ ಮಾರಾಟ ಮಾಡುತ್ತಿದ್ದೇನೆ’ ಎಂದುಆರೋಪಿಗಳು ಹೇಳಿದ್ದರು. ಸೈನಿಕರ ಗುರುತಿನ ಚೀಟಿ, ವಿಳಾಸ ದಾಖಲೆ ಹಾಗೂ ಸಮವಸ್ತ್ರದಲ್ಲಿದ್ದ ಫೋಟೊವನ್ನು ಗ್ರಾಹಕರ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ಅವುಗಳು ತಮ್ಮವೇ ಎಂದು ನಂಬಿಸಿದ್ದರು’.

‘ಮಾರಾಟಗಾರ ಸೈನಿಕನೇ ಇರಬೇಕೆಂದು ತಿಳಿದ ಗ್ರಾಹಕರು, ಬೈಕ್‌ ಖರೀದಿಸಲು ಮುಂದಾಗಿದ್ದರು. ‘ನಾನು ಈಗ ಗಡಿ ಪ್ರದೇಶದಲ್ಲಿದ್ದೇನೆ. ಬೈಕ್ ಮನೆಯಲ್ಲಿದೆ. ಹಣವನ್ನು ನನ್ನ ಬ್ಯಾಂಕ್ ಖಾತೆಗೆ ಹಾಕಿ. ಮನೆ ವಿಳಾಸ ನೀಡುತ್ತೇನೆ. ಅಲ್ಲಿಗೆ ಹೋಗಿ ನೀವು ಬೈಕ್‌ ತೆಗೆದುಕೊಂಡು ಹೋಗಿ’ ಎಂದು ಆರೋಪಿಗಳು ಹೇಳಿದ್ದರು. ಅದರಂತೆ ಗ್ರಾಹಕರು, ಆರೋಪಿಗಳ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿದ್ದಾರೆ. ಅದಾದ ನಂತರ, ಆರೋಪಿಗಳು ಮೊಬೈಲ್ ಸ್ವಿಚ್‌ ಆಫ್ ಮಾಡಿದ್ದಾರೆ. ಇದೇ ರೀತಿಯಲ್ಲೇ 10 ಗ್ರಾಹಕರಿಗೂ ವಂಚನೆ ಆಗಿದೆ’ ಎಂದು ಅಧಿಕಾರಿ ವಿವರಿಸಿದರು.

ದಾಖಲೆ ದುರುಪಯೋಗವೆಂದ ಸೈನಿಕರು: ಆರೋಪಿಗಳು ಗ್ರಾಹಕರಿಗೆ ಕಳುಹಿಸಿದ್ದರು ಎನ್ನಲಾದ ಸೈನಿಕರ ಹಾಗೂ ಸೇನಾಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿದ್ದ ಪೊಲೀಸರು, ಇಬ್ಬರು ಸೈನಿಕರನ್ನು ಭೇಟಿಯಾಗಿ ವಿಚಾರಣೆ ನಡೆಸಿದ್ದರು.

‘ದಾಖಲೆಗಳು ತಮ್ಮವೇ ಎಂದು ಒಪ್ಪಿಕೊಂಡ ಸೈನಿಕರು, ‘ನಮ್ಮ ದಾಖಲೆಗಳನ್ನು ಯಾರೋ ಕದ್ದಿದ್ದಾರೆ. ಅವುಗಳನ್ನೇ ಬಳಸಿಕೊಂಡು ಜನರಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸಿದ್ದಾರೆ. ಆರೋಪಿಗಳ ವಿರುದ್ಧ ನಾವೂ ದೂರು ನೀಡುತ್ತೇವೆ’ ಎಂದು ಹೇಳಿಕೆ ನೀಡಿರುವುದಾಗಿ ಸೈಬರ್ ಠಾಣೆ ಅಧಿಕಾರಿ ತಿಳಿಸಿದರು.

‘ವಂಚನೆ ಬಗ್ಗೆ ಸೈನಿಕರಿಗೆ ಗೊತ್ತೇ ಇಲ್ಲ. ಅವರ ದಾಖಲೆಗಳನ್ನು ಯಾರದ್ದೋ ಮೂಲಕ ಪಡೆದುಕೊಂಡಿರುವ ಆರೋಪಿಗಳು, ಗ್ರಾಹಕರ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ವಂಚಿಸಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ. ದಾಖಲೆಗಳನ್ನು ಆರೋಪಿಗಳಿಗೆ ಕೊಟ್ಟವರು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಸೈನಿಕರ ದಾಖಲೆ ನಂಬಿ ಹಣ ಪಾವತಿ

‘ಆರೋಪಿಗಳು, ಸೈನಿಕರ ಫೋಟೊ ಹಾಗೂ ಗುರುತಿನ ಚೀಟಿ ಕಳುಹಿಸಿದ್ದರು. ಅದನ್ನು ನಂಬಿ, ಬೈಕ್‌ ಖರೀದಿಸಲೆಂದು ಆರೋಪಿಗಳಿಗೆ ವ್ಯಾಲೆಟ್‌ ಮೂಲಕ ₹50 ಸಾವಿರ ಹಣ ಹಾಕಿದ್ದೆ. ಆರೋಪಿಗಳು ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡಿದ್ದಾರೆ’ ಎಂದು ದೂರುದಾರ ಮಂಜುನಾಥ್, ಸೈಬರ್ ಕ್ರೈಂ ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನೊಬ್ಬ ದೂರುದಾರ ಮಧುಸೂದನ್ ರೆಡ್ಡಿ, ‘ಓಎಲ್‌ಎಕ್ಸ್‌ ಜಾಲತಾಣದಲ್ಲಿಯ ಜಾಹೀರಾತು ನೋಡಿ ಯಮಹಾ ಆರ್‌–15 ಬೈಕ್‌ ಕೊಂಡುಕೊಳ್ಳಲು ತೀರ್ಮಾನಿಸಿದ್ದೆ. ತಮ್ಮ ಪೇಟಿಎಂ ಖಾತೆಗೆ ₹76 ಸಾವಿರ ಹಾಕಿಸಿಕೊಂಡಿದ್ದ ಆರೋಪಿಗಳು, ಬೈಕ್‌ ಕೊಡದೇ ವಂಚಿಸಿದ್ದಾರೆ’ ಎಂದು ಹೇಳಿದ್ದಾರೆ.

**

ಮುಖ್ಯಾಂಶಗಳು
ವಂಚನೆಗೀಡಾದ 10 ಗ್ರಾಹಕರಿಂದ ಸೈಬರ್‌ ಠಾಣೆಗೆ ದೂರು

ವಾಟ್ಸ್‌ಆ್ಯಪ್‌ಗೆ ದಾಖಲೆ ಕಳುಹಿಸುತ್ತಿದ್ದರು

ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳ ಮೊಬೈಲ್‌ ಸ್ವಿಚ್ ಆಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.