ADVERTISEMENT

ಯುವತಿಯರಿಗೆ ವಂಚನೆ: ‘ಆನ್‌ಲೈನ್ ವರ’ ಬಂಧನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 19:21 IST
Last Updated 28 ನವೆಂಬರ್ 2020, 19:21 IST
ಬ್ರೈಟ್
ಬ್ರೈಟ್   

ಬೆಂಗಳೂರು: ವೈವಾಹಿಕ ಜಾಲತಾಣದ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಉಡುಗೊರೆ ಕಳುಹಿಸುವ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಆರೋಪಿ ಬ್ರೈಟ್ (25) ಎಂಬುವರನ್ನು ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.

‘ವಂಚನೆಗೀಡಾಗಿದ್ದ ಯುವತಿಯೊಬ್ಬರು ನ. 2ರಂದು ಠಾಣೆಗೆ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ಜಿ. ಗುರುಪ್ರಸಾದ್, ಪಿಎಸ್‌ಐ ಜಿ.ಎನ್. ನಾಗೇಶ್ ನೇತೃತ್ವದ ತಂಡ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದೆ. ಆರೋಪಿಯಿಂದ 4 ಲ್ಯಾಪ್‌ಟಾಪ್ ಹಾಗೂ 10 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಶಾದಿ ಡಾಟ್ ಕಾಮ್‌ ಜಾಲತಾಣದಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ, ವೈಟ್‌ಫೀಲ್ಡ್ ನಿವಾಸಿಯಾಗಿರುವ ಯುವತಿಯನ್ನು ಪರಿಚಯಿಸಿಕೊಂಡಿದ್ದರು. ಮದುವೆಯಾಗುವುದಾಗಿ ಹೇಳಿ ಚಾಟಿಂಗ್ ಮಾಡಲಾರಂಭಿಸಿದ್ದ. ಕೆಲಸ ನಿಮಿತ್ತ ಮಲೇಷಿಯಾಗೆ ಹೋಗುತ್ತಿರುವುದಾಗಿ ಹೇಳಿದ್ದ ಆರೋಪಿ, ಅಲ್ಲಿಂದಲೇ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದ. ಅದಾದ ನಂತರ ತನ್ನ ಸಹಚರರ ಮೂಲಕ ಯುವತಿಗೆ ಕರೆ ಮಾಡಿಸಿದ್ದ ಆರೋಪಿ, ‘ನಿಮ್ಮ ಉಡುಗೊರೆ ಜಪ್ತಿ ಮಾಡಲಾಗಿದೆ. ಶುಲ್ಕ ಪಾವತಿಸಿದರೆ, ನಿಮ್ಮ ವಿಳಾಸಕ್ಕೆ ಉಡುಗೊರೆ ಕಳುಹಿಸುತ್ತೇವೆ’ ಎಂದು ಹೇಳಿಸಿದ್ದ.’

ADVERTISEMENT

‘ಅವರ ಮಾತು ನಂಬಿದ್ದ ಯುವತಿ, ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 24.50 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ ಆರೋಪಿ ನಾಪತ್ತೆಯಾಗಿದ್ದರು. ಬಳಿಕವೇ ಯುವತಿ ಠಾಣೆಗೆ ದೂರು ನೀಡಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

10ಕ್ಕೂ ಹೆಚ್ಚು ಯುವತಿಯವರಿಗೆ ವಂಚನೆ: ‘ಆರೋಪಿ ಸಹಚರರಾದ ಇಮಾನೌಲ್, ಆನ್ ಅಲೆಕ್ಸ್, ಡಿವೈನ್ ಮಧುಕಶಿ, ಇಜಿಜು ಮಧುಕಶಿ ಹಾಗೂ ಮರಿಯಾ ಇಮಾನೌಲ್ ಎಂಬುವರು ಸಹ ಕೃತ್ಯದಲ್ಲಿ ಭಾಗಿಯಾಗಿದ್ದ ಮಾಹಿತಿ ಸಿಕ್ಕಿದೆ. ಇವರೆಲ್ಲರೂ ಇದುವರೆಗೂ 10ಕ್ಕೂ ಹೆಚ್ಚು ಯುವತಿಯರನ್ನು ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ದೆಹಲಿಯ ಉತ್ತಮನಗರದ ವಿಪಿನ್ ಗಾರ್ಡನ್ ಎಕ್ಸ್‌ಟೆನ್ಶನ್‌ನಲ್ಲಿ ವಾಸವಿದ್ದ ಆರೋಪಿ ಬ್ರೈಟ್‌ ಮಾತ್ರ ಸಿಕ್ಕಿಬಿದ್ದಿದ್ದಾನೆ. ಆತನ ಸಹಚರರು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.