ADVERTISEMENT

ಸೋಮನಹಳ್ಳಿ ಟೋಲ್‌: ಶುಲ್ಕ ವಸೂಲಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:31 IST
Last Updated 12 ಮೇ 2025, 16:31 IST
ಸೋಮನಹಳ್ಳಿ ಟೋಲ್‌ ಪ್ಲಾಜಾ
ಸೋಮನಹಳ್ಳಿ ಟೋಲ್‌ ಪ್ಲಾಜಾ   

ಬೆಂಗಳೂರು: ಬೆಂಗಳೂರಿನಿಂದ ಕನಕಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ( 948) ಯಲ್ಲಿನ ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯರಿಂದ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಆರೋಪಿಸಿದೆ.

ಟೋಲ್‌ನಿಂದ 5 ಕಿ.ಮೀ. ಅಂತರದಲ್ಲಿರುವ ಸ್ಥಳೀಯರಿಂದ 60 ಕಿ.ಮೀ. ದೂರದ ಶುಲ್ಕವನ್ನೇ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮನಹಳ್ಳಿ ಟೋಲ್‌ ಗೇಟ್‌ಗೆ ಹೊಂದಿಕೊಂಡಿರುವ ಕಗ್ಗಲೀಪುರ, ಸೋಮನಹಳ್ಳಿ, ನೆಲಗುಳಿ, ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಗ್ರಾಮಗಳಿದ್ದು, ಈ ಎಲ್ಲ ಗ್ರಾಮಸ್ಥರಿಗೆ ಕಗ್ಗಲೀಪುರ ಪ್ರಮುಖ ಕೇಂದ್ರವಾಗಿದೆ. ಗೂಡ್ಸ್ ವಾಹನಗಳೂ ಸೇರಿದಂತೆ ಸ್ಥಳೀಯರು ನಿತ್ಯದ ಕೆಲಸಕ್ಕಾಗಿ ಬೆಂಗಳೂರಿಗೆ ಬರುತ್ತಾರೆ. ಅವರಿಂದಲೂ ಟೋಲ್ ಪಡೆಯಲಾಗುತ್ತಿದ್ದು, ಹೊರೆಯಾಗಿ ಪರಿಣಮಿಸಿದೆ.

ಸುತ್ತಮುತ್ತಲಿನ ಗ್ರಾಮಗಳು ಟೋಲ್ ಗೇಟ್‌ನಿಂದ 5 ಕಿ.ಮೀ. ದೂರದಲ್ಲಿವೆ. ಆಸ್ಪತ್ರೆ, ಪೊಲೀಸ್ ಠಾಣೆ, ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್‌, ಮಾರುಕಟ್ಟೆ ಇದೆ. ಈ ಭಾಗದ ಗ್ರಾಮಸ್ಥರು ನಿತ್ಯ ಕೆಲಸಕ್ಕಾಗಿ ಕಗ್ಗಲೀಪುರಕ್ಕೆ ಬರುತ್ತಾರೆ. ರೈತರು ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಕಗ್ಗಲೀಪುರ ಇಲ್ಲವೇ ಬೆಂಗಳೂರು ಮಾರುಕಟ್ಟೆ ಅವಲಂಬಿಸಿದ್ದಾರೆ. ಆದರೀಗ, ಇವರು ಟೋಲ್ ಶುಲ್ಕ ಪಾವತಿಸಬೇಕಿದೆ. 

ADVERTISEMENT

‘ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡಬೇಕು. ಇಲ್ಲವೇ ಟೋಲ್ ಗೇಟ್‌ನ ಎರಡು ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಬೇಕು. ಇಲ್ಲವಾದರೆ ರಸ್ತೆ ಬಂದ್ ಮಾಡಲಾಗುವುದು’ ಎಂದು ರೈತ ಸಂಘದ ಸಲಹೆಗಾರ ಪ್ರಶಾಂತ್ ಹೊಸದುರ್ಗ ಎಚ್ಚರಿಸಿದ್ದಾರೆ.

‘ಸಮಸ್ಯೆಗಳ ಕುರಿತು ಚರ್ಚಿಸಲು ಗುರುವಾರ ಸುತ್ತಮುತ್ತಲ ಗ್ರಾಮಗಳ ಸಭೆ ಕರೆಯಲಾಗಿದೆ’ ಎಂದು ರೈತ ಸಂಘದ ಕಗ್ಗಲಿಪುರ ಕೇಂದ್ರದ ಅಧ್ಯಕ್ಷ ನದೀಮ್ ಪಾಷಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.