ADVERTISEMENT

ಬೆಂಗಳೂರು: ಚಿಕ್ಕಪೇಟೆ ಶಾಲೆ ಜಾಗ ಮಾರಾಟಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 21:59 IST
Last Updated 18 ಆಗಸ್ಟ್ 2022, 21:59 IST

ಬೆಂಗಳೂರು: ಚಿಕ್ಕಪೇಟೆ ಶಾಲೆ ಜಾಗ ಮಾರಾಟ ಮಾಡಲು ಸರ್ಕಾರದ ಅನುಮತಿ ಕೋರಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ನಡೆಗೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಆ.18ರ ಸಂಚಿಕೆಯಲ್ಲಿ ‘ಸರ್ಕಾರಿ‌ ಶಾಲೆ ಮಾರಾಟಕ್ಕಿದೆ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ತಜ್ಞ ನಿರಂಜನಾರಾಧ್ಯ, ‘ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲು, ಇತರೆ ಶಾಲೆಗಳ ಜತೆ ವಿಲೀನಗೊಳಿಸಲು ಸರ್ಕಾರ ಯೋಚಿಸದೇ ಶಾಲೆಯ ಬೆಲೆ ಬಾಳುವ ಆಸ್ತಿಗಳನ್ನು ಪಟ್ಟಭದ್ರ ಹಿತಾಸಕ್ತಿಗಳಿಗೆ ನೀಡಲು. ಅದಕ್ಕೆ ಚಿಕ್ಕಪೇಟೆಯ ಬಹುಕೋಟಿ ಬೆಲೆ ಬಾಳುವ ಆಸ್ತಿ ಒಂದು ಉದಾಹರಣೆಯಷ್ಟೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಶಾಲೆಯ ಜಾಗ ಉಳಿಸಲು ಹಲವು ಬಾರಿ ಹೋರಾಟ ನಡೆಸಿದ್ದೇವೆ. ಸರ್ಕಾರ ನಮ್ಮ ಹೋರಾಟಕ್ಕೆ ಮನ್ನಣೆ ನೀಡಿಲ್ಲ. ಮಕ್ಕಳ ಹಿತಾಸಕ್ತಿಗಾಗಿ ಮತ್ತೆ ಹೋರಾಟ ನಡೆಸಲಾಗುವುದು’ ಎಂದು ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ಬಿಬಿಎಂಪಿ‌ ಮಾಜಿ ಸದಸ್ಯ ಶಿವಕುಮಾರ್ ಎಚ್ಚರಿಸಿದ್ದಾರೆ.

‘1962-63ರಲ್ಲಿ ಚಿಕ್ಕಪೇಟೆ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದೆ. ಅಂದು 600ಕ್ಕೂ ಹೆಚ್ಚು ಮಕ್ಕಳಿದ್ದರು. ಅದೇ ಕಟ್ಟಡದಲ್ಲಿ ಬಾಲಕಿಯರ ಮಾಧ್ಯಮಿಕ ಶಾಲೆಯೂ ನಡೆಯುತ್ತಿತ್ತು. ಖಾಸಗಿಯವರಿಗೆ ವಾಣಿಜ್ಯ ಮಳಿಗೆ ನಿರ್ಮಿಸಲು ಸರ್ಕಾರ ಅವಕಾಶ ನೀಡಿದ್ದನ್ನು ಅಂದಿನ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ವಿರೋಧಿಸಿದ್ದರು. ನಂತರ ಪ್ರಾಥಮಿಕ ಶಾಲೆಯನ್ನು ಬೇರೆ ಕಡೆಸ್ಥಳಾಂತರಿಸಲಾಯಿತು’ ಎಂದು ನಿವೃತ್ತ ಪೊಲೀಸ್ ಆರ್. ರಾಚಪ್ಪ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಕಟ್ಟಡದ ಎರಡನೇ ಮಹಡಿಯಲ್ಲಿ ಪ್ರೌಢಶಾಲೆ ನಡೆಯುತ್ತಿದೆ. 66 ಮಕ್ಕಳು‌ ಇದ್ದಾರೆ. ಎಲ್ಲರೂ ಆ ಪ್ರದೇಶದ ಬಡ ಕೂಲಿ ಕಾರ್ಮಿಕರ ಮಕ್ಕಳು.

ಘಟನೆಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವಬಿ.ಸಿ.ನಾಗೇಶ್, ‘ಚಿಕ್ಕಪೇಟೆ ಶಾಲೆ ಸೇರಿ ರಾಜ್ಯದ ಯಾವ ಶಾಲೆಗಳ ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳ ಆಸ್ತಿಸಂರಕ್ಷಣೆಗಾಗಿಯೇ ಇದೇ ತಿಂಗಳಿನಿಂದ ಆಂದೋಲನ ಹಮ್ಮಿಕೊಳ್ಳಲಾಗಿದೆ. ಚಿಕ್ಕಪೇಟೆಯ ಶಾಲಾ ಕಟ್ಟಡವನ್ನು ಖಾತೆ ಮಾಡಿಕೊಡುವಂತೆ ಇಲಾಖೆಯ ಆಯುಕ್ತರು ಈಗಾಗಲೇ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ. ಕಟ್ಟಡ ಸ್ವಾಧೀನಕ್ಕೆ ಪಡೆದ ನಂತರ ವಾಣಿಜ್ಯ ಮಳಿಗೆಗಳ ನಿರ್ವಹಣೆ, ಶಾಲಾ ಪ್ರಗತಿ ಕುರಿತು ‌ಸೂಕ್ತ ಕ್ರಮ ಕೈಗೊಳ್ಳಲಾಗುವುದು. 1979ರಲ್ಲಿ ಶಾಲಾ ಜಾಗ ಖಾಸಗಿಗೆ ನೀಡಿದ್ದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ’ ಎಂದು ದೂರಿದರು.

ಮಾರಾಟ ಪ್ರಕ್ರಿಯೆ ಕೈಬಿಡಿ: ದೊರೆಸ್ವಾಮಿ
‘ದಾನಿಗಳು ಸದ್ಭಾವನೆಯಿಂದ ಶಿಕ್ಷಣಕ್ಕೋಸ್ಕರ ಸದ್ಬಳಕೆಗೆ ಕೊಟ್ಟ ಜಾಗದಲ್ಲಿ ಪ್ರಸ್ತುತ ಇರುವ ಶಾಲೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಅಥವಾ ಪರಭಾರೆ ಮಾಡಬಾರದು. ಸಂಬಂಧಪಟ್ಟ ಕಂದಾಯಾಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿರುವುದು ವಿಷಾದನೀಯ’ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿ ಮಧ್ಯಪ್ರವೇಶಿಸಿ, ಶಾಲಾ ಶಿಕ್ಷಣದ ಹಿತಾಸಕ್ತಿ ರಕ್ಷಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.