ADVERTISEMENT

ಆಸರೆ ಪಡೆದ ಅನಾಥ, ಮಗಳನ್ನೇ ಅಪಹರಿಸಿದಾಗ..

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 19:45 IST
Last Updated 30 ನವೆಂಬರ್ 2018, 19:45 IST

ಬೆಂಗಳೂರು: ‘ಅನಾಥ ಎಂಬ ಕಾರಣಕ್ಕೆ ಆಸರೆ ಪಡೆದವನು, ನನ್ನ ಮಗಳನ್ನು ಮನೆಯಿಂದ ಓಡಿಸಿಕೊಂಡು ಹೋಗಿದ್ದಾನೆ. ಅವನನ್ನು ಶಿಕ್ಷಿಸಿ’ ಎಂದು ಕೋರಿದ್ದ ತಾಯಿಯೊಬ್ಬಳ ಮನವಿಯನ್ನು ಹೈಕೋರ್ಟ್‌ ತಳ್ಳಿ ಹಾಕಿದೆ.

‘ಮನೆಬಿಟ್ಟು ಓಡಿ ಹೋಗಿ ಮದುವೆಯಾಗಿರುವ ಇಬ್ಬರೂ ವಯಸ್ಕರಾಗಿದ್ದು ಅವರ ಇಚ್ಛೆಗೆ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿಲ್ಲ’ ಎಂದು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣ?: ಜಯನಗರದ 6ನೇ ಬ್ಲಾಕ್‌ನಲ್ಲಿರುವ 55 ವರ್ಷದ ಮಹಿಳೆಯೊಬ್ಬ‌ರು ಎರಡು ವರ್ಷದ ಹಿಂದೆ ಬಸವನಗುಡಿಯಲ್ಲಿ ನಡೆದು ಹೋಗುತ್ತಿದ್ದರು. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಡೆದು ಹೋಗುವಾಗ ರಸ್ತೆ ಮಧ್ಯದಲ್ಲಿ ಏಕಾಏಕಿ ಕುಸಿದುಬಿದ್ದರು. ಆಗ, ಅಪರಿಚಿತ ಯುವಕನೊಬ್ಬ ಈ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ. ಬಳಿಕ ನನಗೆ ತಂದೆ ತಾಯಿ ಇಲ್ಲ. ಅನಾಥ ಎಂದು ಪರಿಚಯಿಸಿಕೊಂಡ.

ADVERTISEMENT

‘ಅನಾಥ ಪ್ರಾಣ ಕಾಪಾಡಿದನಲ್ಲಾ’ ಎಂಬ ಕಾರಣಕ್ಕೆ ಮಹಿಳೆ ಯುವಕನನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡರು. ಮಹಿಳೆಯ ಪತಿ ಈಗ್ಗೆ 9 ವರ್ಷದ ಹಿಂದೆಯೇ ತೀರಿಕೊಂಡಿದ್ದು, ಅವರಿಗೆ ಬಿ.ಕಾಂ ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ 21 ವರ್ಷದ ಮಗಳು ಹಾಗೂ ದ್ವಿತೀಯ ಪಿ.ಯು. ಓದುವ 18 ವರ್ಷದ ಮಗ ಇದ್ದಾರೆ.

ಮಗಳಿಗೆ 2018ರ ಡಿಸೆಂಬರ್ 2ರಂದು ಮದುವೆ ಮಾಡಲು ಮಹಿಳೆ ತೀರ್ಮಾನಿಸಿದ್ದರು. ಮದುವೆಯಾಗಬೇಕಿದ್ದ ಹುಡುಗ ಲಂಡನ್‌ನಲ್ಲಿದ್ದ. ಏತನ್ಮಧ್ಯೆ ಮಗಳು ಇದೇ 14ರಂದು ಬೆಳಗ್ಗೆ, ‘ಸ್ನೇಹಿತೆಯ ಮನೆಯಲ್ಲಿ ಓದಲು ಹೋಗುತ್ತೇನೆ’ ಎಂದು ಹೋದವರು ವಾಪಸು ಬಂದಿರಲಿಲ್ಲ. ಅದೇ ದಿನ ಬೆಳಗ್ಗೆ 6 ಗಂಟೆಗೆ ಅನಾಥ ಎಂದು ಹೇಳಿಕೊಂಡು ಇವರ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವಕನೂ ಮನೆ ಬಿಟ್ಟು ಹೋಗಿದ್ದ.

ಈ ಕುರಿತಂತೆ ಮಹಿಳೆ ಇದೇ 15ರಂದು ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ‘ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಆರೋಪಿ ಯುವಕ ಹಾಗೂ ಯುವತಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಯುವತಿ, ‘ನಾನು ಯುವಕನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಸ್ವ ಇಚ್ಛೆಯಿಂದ ಆತನ ಜೊತೆಗೆ ಹೋಗಿದ್ದೇನೆ. ಅವನನ್ನು ಬಿಟ್ಟು ಬದುಕಲಾರೆ’ ಎಂದು ದೃಢ
ವಾದ ಧ್ವನಿಯಲ್ಲಿ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ತಾಯಿಯ ನೋವು ಅರ್ಥವಾಗುತ್ತೆ, ಆದರೆ, ಯುವಕ–ಯುವತಿ ವಯಸ್ಕರಾಗಿರುವ ಕಾರಣ ಅವರು ತಮ್ಮಿಷ್ಟದಂತೆ ಬದುಕುವ ಹಕ್ಕು ಹೊಂದಿದ್ದಾರೆ' ಎಂದು ಅರ್ಜಿ ವಿಲೇವಾರಿ ಮಾಡಿದರು.

ಮಗಳು ಕೋರ್ಟ್ ಹಾಲ್‌ನಿಂದ ಹೊರ ಹೋಗುವಾಗ ತಾಯಿ, ‘ನೀನು ನನ್ನ ಪಾಲಿಗೆ ಇವತ್ತಿನಿಂದ ಸತ್ತು ಹೋದೆ’ ಎಂದು ಹಿಡಿಶಾಪ ಹಾಕಿ ದುಃಖದಿಂದ ಉಮ್ಮಳಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.