ADVERTISEMENT

ಜೈಲು ಸೇರಿತು ‘ಓಜಿಕುಪ್ಪಂ’ ಗ್ಯಾಂಗ್

ಜನರ ಗಮನ ಬೇರೆಡೆ ಸೆಳೆದು ಹಣ ದೋಚುವ ಚಾಲಾಕಿಗಳು l ಪೊಲೀಸರ ಆರು ತಿಂಗಳ ಕಾರ್ಯಾಚರಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:09 IST
Last Updated 16 ಡಿಸೆಂಬರ್ 2018, 20:09 IST
ರಾಜು
ರಾಜು   

ಬೆಂಗಳೂರು: ಪೆಟ್ರೋಲ್ ಲೀಕ್ ಆಗ್ತಿದೆ, ಟೈರ್ ಪಂಕ್ಚರ್ ಆಗಿದೆ, ಅಂಗಿಗೆ ಗಲೀಜು ಮೆತ್ಕೊಂಡಿದೆ... ಇಂಥ ಹಲವು ಸುಳ್ಳುಗಳನ್ನು ಹೇಳಿ ಜನರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ ಚಾಲಾಕಿಗಳು, ಕ್ಷಣಾರ್ಧದಲ್ಲಿ ಅವರ ಹಣ ಎಗರಿಸಿಬಿಡುತ್ತಿದ್ದರು. ತಮ್ಮ ಸರಣಿ ಕೃತ್ಯಗಳ ಮೂಲಕ ನಗರವಾಸಿಗಳನ್ನು ಬೆಚ್ಚಿ ಬೀಳಿಸಿದ್ದ ಆ ಗ್ಯಾಂಗ್ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದು ಕಂಬಿ ಹಿಂದೆ ಸೇರಿದೆ.

ರಾಜಧಾನಿಯ ವಿವಿಧೆಡೆ 19 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಲು ಆರು ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿದ್ದ ದಕ್ಷಿಣ ವಿಭಾಗದ ಪೊಲೀಸರು, ಆ ಕೆಲಸದಲ್ಲಿ ಕೊನೆಗೂ ಯಶಸ್ಸು ಸಾಧಿಸಿದ್ದಾರೆ. ಆಂಧ್ರಪ್ರದೇಶದ ‘ಓಜಿಕುಪ್ಪಂ’ ಗ್ಯಾಂಗ್‌ಗೆ ಸೇರಿದ ಐದು ಮಂದಿಯನ್ನು ಹಿಡಿದು ನಗರಕ್ಕೆ ಕರೆತಂದಿದ್ದಾರೆ.

‘ಪ್ರವೀಣ್ (27), ರಮೇಶ್ ಮೋಜನ್ ಗೋಗಲ್ (34), ರಾಜು ಅಲಿಯಾಸ್ ಜೀವನ್ (21), ಕಾರ್ತಿಕ್ ಅಲಿಯಾಸ್ ಕಾಂತಿ (29) ಹಾಗೂ ಅಂಕಯ್ಯ (19) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ₹ 5 ಲಕ್ಷ ನಗದು, ಮೂರು ಬೈಕ್‌ಗಳು, ಟೈರ್ ಪಂಕ್ಚರ್ ಮಾಡಲು ಬಳಸುತ್ತಿದ್ದ ಸ್ಕ್ರೂಡ್ರೈವರ್ ಹಾಗೂ ಮೊಳೆಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಡಿಸಿಪಿ ಅಣ್ಣಾಮಲೈ ಹೇಳಿದರು.

ADVERTISEMENT

ಬ್ಯಾಂಕ್‌ನಿಂದ ಹಿಂಬಾಲಿಸುತ್ತಾರೆ: ಗ್ರಾಹಕರ ಸೋಗಿನಲ್ಲಿ ಬ್ಯಾಂಕುಗಳಿಗೆ ಹೋಗುವ ಇವರು, ಯಾರು ಹೆಚ್ಚು ಹಣ ಡ್ರಾ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಾರೆ. ಬಳಿಕ ಅವರ ಜತೆಗೇ ಆಚೆ ಬಂದು, ಇತರೆ ಸಹಚರರಿಗೂ ಸಿಗ್ನಲ್ ಕೊಡುತ್ತಾರೆ. ನಂತರ ಗ್ರಾಹಕನನ್ನು ಬೈಕ್‌ಗಳಲ್ಲಿ ಹಿಂಬಾಲಿಸಿ, ಜನರ ಓಡಾಟ ಕಡಿಮೆ ಇರುವ ರಸ್ತೆಯಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ.

ತಿಂಗಳಲ್ಲಿ ಒಂದು ಬಾರಿ ಮಾತ್ರ ನಗರಕ್ಕೆ ಬರುವ ಈ ಗ್ಯಾಂಗ್‌ನವರು, ಹೊರವಲಯದ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುತ್ತಾರೆ. ಬ್ರ್ಯಾಂಡೆಂಡ್ ಬಟ್ಟೆಗಳನ್ನು ಹಾಕಿಕೊಂಡು ಬೈಕ್‌ಗಳಲ್ಲಿ ಕಾರ್ಯಾಚರಣೆಗೆ ಇಳಿಯುವ ಇವರು, ಒಂದೇ ದಿನ ನಾಲ್ಕೈದು ಮಂದಿಯಿಂದ ಹಣ ದೋಚಿಕೊಂಡು ಅದೇ ರಾತ್ರಿ ಓಜಿಕುಪ್ಪಂ ಸೇರಿಬಿಡುತ್ತಾರೆ ಎಂದು ಪೊಲೀಸರು ಹೇಳಿದರು.

ಬಟ್ಟೆ, ಹೆಲ್ಮೆಟ್ ಬದಲು: ತಮ್ಮ ಕೃತ್ಯದ ಬಗ್ಗೆ ಪೊಲೀಸರಿಗೆ ಸುಳಿವು ಸಿಗಬಾರದೆಂದು ಪದೇ ಪದೇ ವಾಸ್ತವ್ಯ ಬದಲಿಸುವ ಆರೋಪಿಗಳು, ಒಮ್ಮೆ ಧರಿಸಿ ಅಂಗಿ ಹಾಗೂ ಹೆಲ್ಮೆಟ್‌ಗಳನ್ನು ಮತ್ತೆ ಧರಿಸುವುದಿಲ್ಲ. ಮೂರು ಬೈಕ್‌ಗಳನ್ನು ಇಟ್ಟುಕೊಂಡಿದ್ದ ಇವರು, ಪ್ರತಿ ಬಾರಿ ಕೃತ್ಯಕ್ಕೆ ಹೋಗುವಾಗಲೂ ಬೇರೆ ಬೇರೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದರು ಎಂದೂ ಮಾಹಿತಿ ನೀಡಿದರು.

ಮೂರು ಗ್ಯಾಂಗ್‌ಗಳ ಬಗ್ಗೆ ಅಧ್ಯಯನ

ಇತ್ತೀಚೆಗೆ ವರದಿಯಾದ ಐದು ಪ್ರಕರಣಗಳಲ್ಲಿ ಕೃತ್ಯದ ಶೈಲಿ ಒಂದೇ ರೀತಿ ಇತ್ತು. ಹೀಗಾಗಿ, ಜನರ ಗಮನ ಬೇರೆಡೆ ಸೆಳೆದು ವಂಚಿಸುವುದರಲ್ಲಿ ಕುಖ್ಯಾತಿ ಹೊಂದಿರುವ ತಮಿಳುನಾಡಿನ 'ರಾಮ್‌ಜೀ ಗ್ಯಾಂಗ್‌, ಆಂಧ್ರಪ್ರದೇಶದ ‘ಬಿತ್ರಗುಂಟ ಗ್ಯಾಂಗ್’ ಹಾಗೂ ‘ಓಜಿಕುಪ್ಪಂ ಗ್ಯಾಂಗ್‌’ಗಳ ಬಗ್ಗೆ ಅಧ್ಯಯನ ನಡೆಸಿದೆವು’ ಎಂದು ಪೊಲೀಸರು ವಿವರಿಸಿದರು.

‘ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಈ ಗ್ಯಾಂಗ್‌ಗಳ ಸದಸ್ಯರನ್ನು ವಿಚಾರಣೆ ನಡೆಸಿದಾಗ, ‘ರಾಮ್‌ಜೀ ಹಾಗೂ ಬಿತ್ರಗುಂಟ ಗ್ಯಾಂಗ್‌ನವರು ಒಬ್ಬ ಮಹಿಳೆಯನ್ನು ಬಳಸಿಕೊಂಡೇ ಕೃತ್ಯ ಎಸಗುತ್ತಾರೆ. ಈ ಪ್ರಕರಣಗಳಲ್ಲಿ ಪುರುಷರು ಮಾತ್ರ ಕಾರ್ಯಾಚರಣೆ ನಡೆಸಿದ್ದಾರೆ. ಹೀಗಾಗಿ, ಆ ಎರಡು ಗ್ಯಾಂಗ್‌ಗಳ ಪಾತ್ರವಿರುವ ಸಾಧ್ಯತೆ ಕಡಿಮೆ’ ಎಂದು ಹೇಳಿದರು. ಹೀಗಾಗಿ, ಓಜಿಕುಪ್ಪಂ ಗ್ಯಾಂಗ್‌ನವರ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಿದ್ದೆವು.’

‘ಇದೇ ಸಮಯಕ್ಕೆ ಬ್ಯಾಂಕ್‌ವೊಂದರ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಅಂಕಯ್ಯನ ಚಹರೆ ಸಿಕ್ಕಿತು. ಜೈಲಿನಲ್ಲಿದ್ದ ಓಜಿಕುಪ್ಪಂ ಗ್ಯಾಂಗ್‌ನ ಸದಸ್ಯನೊಬ್ಬ ಆತನನ್ನು ಗುರುತಿಸಿದ. ಆ ನಂತರ ಅಂಕಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಗ್ಯಾಂಗ್‌ನ ಚರಿತ್ರೆಯನ್ನೇ ಬಾಯ್ಬಿಟ್ಟ’ ಎಂದು ಮಾಹಿತಿ ನೀಡಿದರು.

ಅಂಗಿ ಮೇಲೆ ಉಗೀತಾರೆ!

ಈ ಗ್ಯಾಂಗ್‌ನವರು ಬಿಸ್ಕತ್ ಜಗಿದು ಅಂಗಿ ಮೇಲೆ ಉಗಿಯುವ ಹಾಗೂ ಮೈಮೇಲೆ ತುರಿಕೆ ಪೌಡರ್ ಎರಚುವ ಮೂಲಕವೂ ಹಣ ದೋಚುತ್ತಾರೆ.

‘ಗ್ರಾಹಕ ಬ್ಯಾಂಕ್‌ನಿಂದ ಹೊರಬರುತ್ತಿದ್ದಂತೆಯೇ ಬಾಯಲ್ಲಿ ಬಿಸ್ಕತ್ ಹಾಕಿಕೊಂಡು ಜಗಿಯುವ ಒಬ್ಬಾತ, ಹಿಂದಿನಿಂದ ಹೋಗಿ ಅದನ್ನು ಅಂಗಿ ಮೇಲೆ ಉಗಿದುಬಿಡುತ್ತಾನೆ. ನಂತರ ‘ಏನ್ ಸರ್.. ಬಟ್ಟೆ ಮೇಲೆ ಗಲೀಜು ಬಿದ್ದಿದೆ’ ಎಂದು ಹೇಳುವ ಆತ, ಅದನ್ನು ತೊಳೆದುಕೊಳ್ಳಲು ತಾನೇ ನೀರಿನ ಬಾಟಲಿಯನ್ನೂ ಕೊಡುತ್ತಾನೆ. ಅವರು ಬ್ಯಾಗ್ ಕೆಳಗಿಟ್ಟು ಅಂಗಿ ತೊಳೆದುಕೊಳ್ಳುತ್ತಿರುವಾಗ ಇನ್ನೊಬ್ಬ ಬ್ಯಾಗ್ ತೆಗೆದುಕೊಂಡು ಹೋಗುತ್ತಾನೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.