ADVERTISEMENT

‘ಜನಸಂಘಕ್ಕೆ ಸೈದ್ಧಾಂತಿಕ ತಳಹದಿ ಹಾಕಿದ ನೇತಾರ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 15:34 IST
Last Updated 25 ಸೆಪ್ಟೆಂಬರ್ 2021, 15:34 IST
ಎನ್‌.ರವಿಕುಮಾರ್‌
ಎನ್‌.ರವಿಕುಮಾರ್‌   

ಬೆಂಗಳೂರು: ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಅವರು ಭಾರತೀಯ ಜನಸಂಘಕ್ಕೆ ಸೈದ್ಧಾಂತಿಕ ತಳಹದಿ ಹಾಕಿದ ನೇತಾರ. ಅವರು ಹಾಕಿಕೊಟ್ಟ ತಳಹದಿಯ ಮೇಲೆಯೇ ಬಿಜೆಪಿ ಬಲವಾಗಿ ಬೆಳೆದುನಿಂತಿದೆ ಎಂದು ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ನಡೆದ ದೀನ ದಯಾಳ್‌ ಉಪಾಧ್ಯಾಯ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಉಪಾಧ್ಯಾಯ ಅವರು ಭಾರತೀಯ ಜನಸಂಘದ ಮೊದಲ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಆಗ ಜನಸಂಘಕ್ಕೆ ಸೈದ್ಧಾಂತಿಕ ಸ್ಪಷ್ಟನೆ ನೀಡಿದ್ದರು. ಅದೇ ಸಿದ್ಧಾಂತದಲ್ಲಿ ಬಿಜೆಪಿ ಮುನ್ನಡೆಯುತ್ತಿದೆ’ ಎಂದರು.

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದು ಉಪಾಧ್ಯಾಯರ ಪ್ರತಿಪಾದನೆ. ಅದನ್ನು ಸಾಕಾರಗೊಳಿಸುವುದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದೆ. ದೇಶದ ಏಕತೆಯನ್ನು ರಕ್ಷಿಸುವುದು ಮತ್ತು ಸ್ವದೇಶಿ ಆರ್ಥಿಕ ಚಿಂತನೆಯನ್ನು ಸಾಕಾರಗೊಳಿಸುವ ಪ್ರಯತ್ನದ ಹಿಂದೆಯೂ ಉಪಾಧ್ಯಾಯ ಅವರ ಸಿದ್ಧಾಂತಗಳ ಪ್ರಭಾವವಿದೆ ಎಂದು ಹೇಳಿದರು.

ADVERTISEMENT

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬುದು ಉಪಾಧ್ಯಾಯ ಅವರ ಆಶಯವಾಗಿತ್ತು. ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಉಜ್ವಲ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌, ಜನ–ಧನ ಮತ್ತಿತರ ಯೋಜನೆಗಳು ಈ ಉದ್ದೇಶಕ್ಕಾಗಿಯೇ ಜಾರಿಗೆ ಬಂದಿವೆ ಎಂದರು.

ಬಿಜೆಪಿ ರಾಜ್ಯ ಕಚೇರಿ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಎಸ್.ಎಸ್. ಮಿಟ್ಟಲ್‍ಕೋಡ್, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.