ADVERTISEMENT

ಬೆಂಗಳೂರು: ‘ಪರಿಸರಕ್ಕಾಗಿ ನಾವು’ ಸಂಘಟನೆ ಇದೇ 12ಕ್ಕೆ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:15 IST
Last Updated 8 ಏಪ್ರಿಲ್ 2025, 15:15 IST
a t r
a t r   

ಬೆಂಗಳೂರು: ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ‘ಪರಿಸರಕ್ಕಾಗಿ ನಾವು’ ಸಂಘಟನೆಯು ಏಪ್ರಿಲ್‌ 12ರಂದು ಅಸ್ತಿತ್ವಕ್ಕೆ ಬರಲಿದೆ. ಅಂದು ನಗರದ ಸೇಂಟ್‌ ಜೋಸೆಫ್‌ ಕಾನೂನು ಮಹಾವಿದ್ಯಾಲಯದಲ್ಲಿ ಸಂಘಟನೆಗೆ ಚಾಲನೆ ದೊರೆಯಲಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎ.ಟಿ. ರಾಮಸ್ವಾಮಿ, ‘ಬೇರೆಲ್ಲ ಕೆಲಸಗಳಿಗಿಂತಲೂ ಪರಿಸರದ ಸಂರಕ್ಷಣೆ ಬಹಳ ಮಹತ್ವದ್ದು. ಅದಕ್ಕಾಗಿ ನನ್ನ ಭವಿಷ್ಯದ ಸಂಪೂರ್ಣ ಸಮಯವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಡಲು ತೀರ್ಮಾನಿಸಿದ್ದೇನೆ. ರಾಜ್ಯದ ಬೇರೆ ಬೇರೆ ಪರಿಸರ ಸಂಘಟನೆಗಳು, ಪರಿಸರಾಸಕ್ತರು, ತಜ್ಞರನ್ನು ಒಳಗೊಂಡ ರಾಜ್ಯಮಟ್ಟದ ‘ಪರಿಸರಕ್ಕಾಗಿ ನಾವು’ ಸಂಘಟನೆಯ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.

‘ವಿಷಮುಕ್ತ ಭೂಮಿ, ಕುಡಿಯಲು ಶುದ್ಧ ನೀರು, ಉಸಿರಾಡಲು ಸ್ವಚ್ಛ ಗಾಳಿಯನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಬೇಕು. ಈಗಾಗಲೇ ನಾವು ಪರಿಸರವನ್ನು ವಿಷಮಯಗೊಳಿಸುತ್ತಾ ತಪ್ಪು ಮಾಡಿದ್ದೇವೆ. ಇನ್ನಾದರೂ ತಿದ್ದಿಕೊಳ್ಳಬೇಕಿದೆ. ಎಲ್ಲರೂ ಸ್ವಚ್ಛ ಸ್ವಸ್ಥ, ಹಸಿರು ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪರಿಸರ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಮಾತನಾಡಿ, ‘ಅರಣ್ಯ ಇಲಾಖೆ, ಕೃಷಿ ಇಲಾಖೆ, ನೀರಾವರಿ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಯುವಜನ ಇಲಾಖೆ ಸೇರಿದಂತೆ 14 ಇಲಾಖೆಗಳು ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುವ ಅವಕಾಶ ಇದ್ದರೂ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಸರದ ಬಗ್ಗೆ ಜಾಗೃತಿ ಮೂಡಿಸಲು, ಪರಿಸರ ಸಂಬಂಧಿ ದಿನಗಳನ್ನು ಆಚರಿಸಲು ಸರ್ಕಾರಕ್ಕೆ ಸಹಕಾರ ನೀಡಲು ನಮ್ಮಲ್ಲಿ ತರಬೇತಿ ಹೊಂದಿರುವ 1,200ಕ್ಕೂ ಅಧಿಕ ಪರಿಸರ ಕಾರ್ಯಕರ್ತರು ತಯಾರಿದ್ದಾರೆ’ ಎಂದು ತಿಳಿಸಿದರು.

‘ಪರಿಸರಕ್ಕಾಗಿ ನಾವು’ ಸಂಘಟನೆಯ ಅ.ನ. ಯಲ್ಲಪ್ಪ ರೆಡ್ಡಿ, ಭಾರ್ಗವಿ ವಿ.ಎಸ್‌. ರಾವ್‌, ರೇಣುಕಾಪ್ರಸಾದ್‌, ಪಾರ್ವತಿ ಶ್ರೀರಾಂ, ಸಿಕಂದರ್‌ ಸಿ.ಎಚ್‌. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.