ADVERTISEMENT

‘ದೇಶ ವಿಭಜನೆಯ ಕಣ್ಣೀರಕಥನ ದಾಖಲಾಗಿಲ್ಲ’

ಪ್ರಾಧ್ಯಾಪಕಿ ಅಂಜಲಿ ಗೇರಾ ರಾಯ್ ಬೇಸರ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:35 IST
Last Updated 16 ಆಗಸ್ಟ್ 2019, 19:35 IST
ಅಂಜಲಿ ಗೇರಾ ರಾಯ್ ಮಾತನಾಡಿದರು. ಡಿ.ಎನ್. ಯೋಗೀಶ್ವರಪ್ಪ ಇದ್ದರು
ಅಂಜಲಿ ಗೇರಾ ರಾಯ್ ಮಾತನಾಡಿದರು. ಡಿ.ಎನ್. ಯೋಗೀಶ್ವರಪ್ಪ ಇದ್ದರು   

ಬೆಂಗಳೂರು: ‘ದೇಶ ವಿಭಜನೆ ಬಳಿಕ ನಡೆದ ಹಿಂಸಾತ್ಮಕ ಘಟನೆಯಿಂದ ಹಲವಾರು ಕುಟುಂಬ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದವು. ಅಂತಹವರ ಕಣ್ಣೀರ ಕಥನ ಇತಿಹಾಸದಲ್ಲಿ ದಾಖಲಾಗಿಲ್ಲ’ ಎಂದು ಖರಗಪುರ ಐಐಟಿಯ ಮಾನವಿಕ ಶಾಸ್ತ್ರ ಹಾಗೂ ಸಮಾಜ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿಅಂಜಲಿ ಗೇರಾ ರಾಯ್ ಬೇಸರ ವ್ಯಕ್ತಪಡಿಸಿದರು.

ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ ದಕ್ಷಿಣ ಪ್ರಾದೇಶಿಕ ಕೇಂದ್ರ ನಗರದಲ್ಲಿ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ‘ಭಾರತ ವಿಭಜನೆಯ ಮರೆಯಲಾಗದ ಹಾಗೂ ಮರೆತುಹೋದ ನೆನಪುಗಳು’ ಎಂಬ ಬಗ್ಗೆ ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟ ಹಾಗೂ ದೇಶ ವಿಭಜನೆ ಪ್ರಕ್ರಿಯೆ ಬಗ್ಗೆ ಇತಿಹಾಸದ ಪಠ್ಯದಲ್ಲಿ ಓದಿ ತಿಳಿದುಕೊಂಡಿದ್ದೇವೆ. ಆದರೆ, ಆ ಸಂದರ್ಭ
ದಲ್ಲಿ ಜನರು ಅನುಭವಿಸಿದ ಕಷ್ಟಗಳು ಹಾಗೂ ಮಾಡಿಕೊಂಡ ಹೊಂದಾಣಿಕೆಗಳು ಹೊರ ಪ್ರಪಂಚಕ್ಕೆ ದರ್ಶನವಾಗಲಿಲ್ಲ. ಭಾರತ–ಪಾಕಿಸ್ತಾನ ವಿಭಜನೆಯಾದಾಗ ವಲಸಿಗರು ಮಾನಸಿಕ ಹಿಂಸೆಗೆ ಒಳಗಾದರು. ಇದನ್ನು ಹೇಳಿಕೊಂಡರೆ ಸಮಾಜ ತಮ್ಮನ್ನು ಹೇಗೆ ಸ್ವೀಕರಿಸುತ್ತದೆಯೋ ಎಂಬ ಭಯದಿಂದ ಹಾಗೂ ಮಾನಕ್ಕೆ ಅಂಜಿ ಸುಮ್ಮನಾದರು’ ಎಂದು ತಿಳಿಸಿದರು.

ADVERTISEMENT

‘ವಲಸಿಗರು ಆಯಾ ಪ್ರದೇಶಕ್ಕೆ ಅನುಗುಣವಾದ ಸಂಸ್ಕೃತಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಬೇಕಾಗುತ್ತದೆ. ವಿಭಜನೆಯ ಸಂದರ್ಭದಲ್ಲಿ ಸಹ ಇದೇ ಆಯಿತು. ಘಟಿಸಿದ ಘಟನೆಯನ್ನು ಮರೆಯಲು ಹಲವು ವರ್ಷಗಳು ಬೇಕಾದವು. ಅಂತಹವರನ್ನು ಗುರುತಿಸಿ, ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದರೆ ಹೊಸ ಸಂಗತಿಗಳು ತಿಳಿಯಲಿವೆ’ ಎಂದರು.

ತುಮಕೂರಿನ ಸಿದ್ಧಗಂಗಾ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಎನ್‌. ಯೋಗೀಶ್ವರಪ್ಪ ಮಾತನಾಡಿ, ‘ದೇಶ ವಿಭಜನೆಯ ಬಿಸಿ ದಕ್ಷಿಣ ಭಾರತದ ಜನತೆಗೆ ಅಷ್ಟಾಗಿ ತಟ್ಟಲಿಲ್ಲ. 20ನೇ ಶತಮಾನದಲ್ಲಿ ಬ್ರಿಟಿಷರು ನಾಲ್ಕು ದೇಶಗಳನ್ನು ವಿಭಜನೆ ಮಾಡಿದರು. ಇದರಲ್ಲಿ ಭಾರತದ ವಿಭಜನೆ ಭಿನ್ನವಾದದ್ದಾಗಿದೆ. ವಿಭಜನೆಯ ಬಳಿಕ ಪಂಜಾಬ್, ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಹಿಂಸೆಗಳು ನಡೆದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.