ADVERTISEMENT

ಪಕ್ಷಕ್ಕೆ ತೊಂದರೆ ಕೊಡುವವರನ್ನು ಸಹಿಸಲಾಗದು: ದಿನೇಶ್‌

ಸಚಿವರು, ಶಾಸಕರಿಗೆ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 28 ಜುಲೈ 2018, 11:20 IST
Last Updated 28 ಜುಲೈ 2018, 11:20 IST
ನಗರದಲ್ಲಿ ಶನಿವಾರ ಕರ್ನಾಟಕ ಪ್ರದೇಶ ಮುಂಚೂಣಿ ಘಟಕಗಳು ಮಾಜಿ ಪದಾಧಿಕಾರಿಗಳ ಒಕ್ಕೂಟ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇದ್ದರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಕರ್ನಾಟಕ ಪ್ರದೇಶ ಮುಂಚೂಣಿ ಘಟಕಗಳು ಮಾಜಿ ಪದಾಧಿಕಾರಿಗಳ ಒಕ್ಕೂಟ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪಕ್ಷಕ್ಕೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಪಕ್ಷದ ಶಿಸ್ತನ್ನು ಉಲ್ಲಂಘಿಸಿ ವರ್ತಿಸುವವರನ್ನು ಸಹಿಸಿಕೊಂಡರೆ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ ರಾಜಿ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕಾರ್ಯಕರ್ತರಿಗೆ ಖಡಕ್‌ ಸಂದೇಶ ರವಾನಿಸಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಕೆಪಿಸಿಸಿ ಮಂಚೂಣಿ ಘಟಕಗಳ ಮಾಜಿ ಪದಾಧಿಕಾರಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾದ ಕಾಂಗ್ರೆಸ್‌ ಸಚಿವರು, ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಮುಂದೆ ಮುಂದಿನ ಚುನಾವಣೆಯನ್ನು ಎದುರಿಸಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರವನ್ನು ಸ್ಥಾಪಿಸುವ ದೊಡ್ಡ ಸವಾಲು ಇದೆ. ಅದಕ್ಕೆ ಹಿರಿಯ ನಾಯಕರ ಮಾರ್ಗದರ್ಶನ ಬೇಕು. ಹೊಸ ನಾಯಕತ್ವವೂ ಬೆಳೆಯಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇವೆ’ ಎಂದರು.

ADVERTISEMENT

‘ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಎತ್ತಿದ ಯಾವುದೇ ಪ್ರಶ್ನೆಗಳಿಗೂ ಪ್ರಧಾನಿ ಮೋದಿಯವರು ಉತ್ತರಿಸಲಿಲ್ಲ. ಬದಲಾಗಿ ತಮ್ಮದೇ ಆದ ಮಾತುಗಳನ್ನಾಡುತ್ತಾ ಹೋದರು. ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ಸರ್ವಾಧಿಕಾರಿ ಧೋರಣೆ ಅವರಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಿಜೆಪಿಯ ಕಾರ್ಯವೈಖರಿಯು ದೇಶದ ದಿಕ್ಕು ಬದಲಿಸುವ ಆತಂಕ ಎದುರಾಗಿದೆ. ಜನಾಂಗ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸವಾಗುತ್ತಿದೆ. ಬಸವರಾಜ್‌ ಯತ್ನಾಳ್ ಅವರಂತೂ ಬುದ್ದಿಜೀವಿಗಳಿಗೆ ಗುಂಡಿಟ್ಟು ಸಾಯಿಸುವ ಮಾತನಾಡುತ್ತಿದ್ದಾರೆ. ಇಂಥ ಪ್ರವೃತ್ತಿಗಳನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತ’ ಎಂದರು.

‘ನಾಲ್ಕೂವರೆ ವರ್ಷಗಳಿಂದ ಮೋದಿ ತನ್ನ ಭಾಷಣದಲ್ಲಿ ಹೇಳಿದ ಯಾವುದೇ ಮಾತುಗಳಿಗೆ ತಕ್ಕಂತೆ ನಡೆದುಕೊಂಡಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮೋದಿ ಅವರ ಸ್ನೇಹಿತರೇ ಬ್ಯಾಂಕ್‌ಗಳ ಹಣ ಲೂಟಿ ಮಾಡಿ ದೇಶ ಬಿಟ್ಟು ಓಡಿಹೋಗಿದ್ದಾರೆ’ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಸಿದ್ದರಾಮಯ್ಯ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಸಲೀಂ ಮಹಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.