ADVERTISEMENT

ಬೆಂಗಳೂರು: ವಿಮಾನ ನಿಲ್ದಾಣದ ಮಹಿಳಾ ತಪಾಸಣೆ ಬೂತ್‌ಗೆ ನುಗ್ಗಿದ್ದ ಪ್ರಯಾಣಿಕ ಬಂಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 15:48 IST
Last Updated 15 ಫೆಬ್ರುವರಿ 2024, 15:48 IST
<div class="paragraphs"><p>ಬಂಧನ</p></div>

ಬಂಧನ

   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ತಪಾಸಣೆ ಬೂತ್‌ಗೆ (ಫ್ರಿಸ್ಕಿಂಗ್ ಬೂತ್) ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ರುಕುಡ್ಜೊ ಚಿರಿಕುಮಾರಾರ್ (30) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಜಿಂಬಾಬ್ವೆ ಪ್ರಜೆಯಾದ ರುಕುಡ್ಜೊ ಕೆಲಸ ನಿಮಿತ್ತ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ. ವಾಪಸು ದೆಹಲಿ ಮೂಲಕ ತಮ್ಮೂರಿಗೆ ಹೊರಡಲು ನಿಲ್ದಾಣಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಕೇಂದ್ರೀಯ ಕೈಗಾರಿಕಾ ಮೀಸಲು ಪಡೆಯ (ಸಿಐಎಸ್‌ಎಫ್‌) ಇನ್‌ಸ್ಪೆಕ್ಟರ್ ನೀಡಿರುವ ದೂರು ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ದೆಹಲಿಗೆ ಹೋಗುವುದಕ್ಕಾಗಿ ಫೆ. 13ರಂದು ರಾತ್ರಿ 11.25 ಗಂಟೆ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಪ್ರವೇಶ ದ್ವಾರದಲ್ಲಿ ಬ್ಯಾಗ್ ಹಾಗೂ ಎಲೆಕ್ಟ್ರಿಕ್ ವಸ್ತುಗಳನ್ನು ತಪಾಸಣೆಗೆಂದು ಯಂತ್ರದಲ್ಲಿ ಇರಿಸಿದ್ದ. ನಂತರ, ಮಹಿಳೆಯರ ತಪಾಸಣೆಗೆ ಮೀಸಲಿಟ್ಟಿದ್ದ ಬೂತ್‌ ಒಳಗೆ ನುಗ್ಗಿದ್ದ.’

‘ಆರೋಪಿ ವರ್ತನೆಯನ್ನು ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಪ್ರಶ್ನಿಸಿದ್ದರು. ಸಿಬ್ಬಂದಿಯನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ, ಹಲ್ಲೆ ಸಹ ಮಾಡಿದ್ದ. ಪರಸ್ಪರ ಗಲಾಟೆ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಹೆಚ್ಚುವರಿ ಸಿಬ್ಬಂದಿ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು’ ಎಂದು ಪೊಲೀಸರು ತಿಳಿಸಿದರು.

‘ನಿಲ್ದಾಣಕ್ಕೆ ಹೋಗಿದ್ದ ಗಸ್ತು ವಾಹನದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ’ ಎಂದರು.

‘ಆರೋಪಿ ರುಕುಡ್ಜೊ ಕಂಪನಿಯೊಂದರ ಲೆಕ್ಕಾಧಿಕಾರಿ ಎಂಬುದು ಗೊತ್ತಾಗಿದೆ. ಈತನ ಹಿನ್ನೆಲೆ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.