ADVERTISEMENT

ಬೆಂಗಳೂರು: ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ

ಜುಲೈ 16ರಂದು 5.17 ಲಕ್ಷ ಮಂದಿ ಪ್ರಯಾಣ, ಎಲ್ಲ ಪ್ರವೇಶ ದ್ವಾರಗಳ ಬಾಗಿಲು ತೆರೆಯಲು ಆಗ್ರಹ

ಅದಿತ್ಯ ಕೆ.ಎ.
Published 25 ಜುಲೈ 2022, 20:18 IST
Last Updated 25 ಜುಲೈ 2022, 20:18 IST
ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರು
ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರು   

ಬೆಂಗಳೂರು: ಮೆಟ್ರೊ ರೈಲು ಅವಲಂಬಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕೋವಿಡ್‌ ಬಳಿಕ ಜುಲೈನಲ್ಲಿ ಗರಿಷ್ಠ ಪ್ರಯಾಣಿಕರು ಓಡಾಟ ನಡೆಸಿದ್ದಾರೆ. ಇದರಿಂದ ಆದಾಯ ವೃದ್ಧಿಯ ಜತೆಗೆ ವಿಸ್ತರಣೆ ಕಾಮಗಾರಿ ವೇಗಕ್ಕೂ ಅನುಕೂಲವಾಗಲಿದೆ.

ಕೋವಿಡ್‌ ಸಾಂಕ್ರಾಮಿಕದ ಮೊದಲ ಅಲೆಯಲ್ಲಿ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿದ್ದರೆ, 2ನೇ ಅಲೆಯ ವೇಳೆ ಪ್ರಯಾಣಿಕರಿಗೆ ಹಲವು ನಿರ್ಬಂಧ ವಿಧಿಸಲಾಗಿತ್ತು. ಪ್ರಯಾಣಿಕರೂ ಹೆದರಿ ಮೆಟ್ರೊ ಪ್ರಯಾಣ ಬಿಟ್ಟು ಸ್ವಂತ ವಾಹನಗಳಲ್ಲಿ ಓಡಾಟ ನಡೆಸುತ್ತಿದ್ದರು.

ಈಗ ಮಾಸ್ಕ್‌ ಹೊರತುಪಡಿಸಿ ಬೇರೆ ಯಾವ ನಿರ್ಬಂಧವೂ ಇಲ್ಲ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ನಿಧಾನವಾಗಿ ಮತ್ತೆ ಚೇತರಿಕೆ ಕಾಣಿಸುತ್ತಿದೆ. ರೈಲುಗಳ ಸಂಚಾರ ಹೆಚ್ಚಿಸಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ.

ADVERTISEMENT

ಜುಲೈ 16ರಂದು (ಶನಿವಾರ) ಒಂದೇ ದಿನ 5.17 ಲಕ್ಷ ಪ್ರಯಾಣಿಕರು ಹಸಿರು, ನೇರಳೆ ಮಾರ್ಗದಲ್ಲಿ ಪ್ರಯಾಣಿಸಿದ್ದು, ಕೋವಿಡ್‌ ನಂತರದ ದಿನಗಳಲ್ಲಿ ಇದು ದಾಖಲೆಯಾಗಿದೆ. ಈ ತಿಂಗಳ ವಾರಾಂತ್ಯದಲ್ಲೂ ಇದೇ ಸ್ಥಿತಿಯಿತ್ತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದರು. ‘ಸದ್ಯಕ್ಕೆ ರೈಲು ಓಡಾಟದ ಸಂಖ್ಯೆ ಹೆಚ್ಚಿಸುವ ಆಲೋಚನೆ ಇಲ್ಲ’ ಎಂದೂ ಅವರು ಪ್ರತಿಕ್ರಿಯಿಸಿದರು.

‘ಕೋವಿಡ್‌ಪೂರ್ವ ಅವಧಿಯಲ್ಲಿ ದಿನವೊಂದರಲ್ಲಿ 6.1 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಸಂಚರಿಸಿದ್ದು ದಾಖಲೆ ಆಗಿತ್ತು. ಕೋವಿಡ್ ನಂತರ ಚೇತರಿಕೆ ಕಾಣಿಸಿದ್ದರೂ ನಿರೀಕ್ಷೆಯ ಮಟ್ಟ ತಲುಪಿಲ್ಲ. ಎರಡೂ ಮಾರ್ಗಗಳಲ್ಲಿ ವಾರದ ದಿನಗಳಲ್ಲಿ ಸರಾಸರಿ 4.6 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್‌ ಚವಾಣ್ ತಿಳಿಸಿದರು.

ಹೊರ ಊರುಗಳಿಂದ ನಗರದ ಹೃದಯ ಭಾಗಕ್ಕೆ ಬರುವವರು, ನಗರದಿಂದ ಹೊರ ವಲಯಕ್ಕೆ ತೆರಳುವವರು ಮೆಟ್ರೊ ಅವಲಂಬಿಸುವುದು ಈಗ ಹೆಚ್ಚುತ್ತಿದೆ.

ಕೋವಿಡ್‌ ವೇಳೆ ಕೆಲವು ನಿಲ್ದಾಣಗಳ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಈಗಲೂ ಅದೇ ಸ್ಥಿತಿಯಿದೆ. ಈಗ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ನಿರ್ಬಂಧ ತೆರವು ಮಾಡುವಂತೆ ಪ್ರಯಾಣಿಕರು ಕೋರಿದ್ದಾರೆ. ಮೆಜಿಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ ಕಡೆಯಿಂದ ಬರುವ ಪ್ರವೇಶ ದ್ವಾರ, ಸಿಟಿ ಸೆಂಟ್ರಲ್‌ ನಿಲ್ದಾಣ, ಕಬ್ಬನ್‌ ಪಾರ್ಕ್ ನಿಲ್ದಾಣದಲ್ಲಿ ಕೆಲವು ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ.

2ನೇ ಹಂತದ ಕಾಮಗಾರಿ ಚುರುಕು:

ಮೆಟ್ರೊ ರೈಲು ಮಾರ್ಗದ 2ನೇ ಹಂತದ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ. ಸಿಲ್ಕ್‌ಬೋರ್ಡ್‌–ಕೆ.ಆರ್‌.ಪುರ, ಕೆ.ಆರ್‌.ಪುರ–ಹೆಬ್ಬಾಳ, ಹೆಬ್ಬಾಳ–ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ತನಕ ಸಂಪರ್ಕ ಕಲ್ಪಿಸಲು ಕಾಮಗಾರಿ ಪ್ರಗತಿಯಲ್ಲಿದೆ. ಈ ಮಾರ್ಗದಲ್ಲಿ ಸಂಚಾರ ಆರಂಭವಾದರೆ ವಾಹನ ದಟ್ಟಣೆಯ ಕಿರಿಕಿರಿಗೆ ಮುಕ್ತಿ ಸಿಗಲಿದೆ. ಈ ಭಾಗದಲ್ಲಿ ಐಟಿ ಕಂಪನಿಗಳು ಹೆಚ್ಚಾಗಿದ್ದು, ಬಹುಬೇಗ ಕಾಮಗಾರಿ ಪೂರ್ಣಗೊಳಿಸಲಿ ಎಂಬುದು ಐಟಿ–ಬಿಟಿ ಉದ್ಯೋಗಿಗಳ ಬೇಡಿಕೆ.

ನಿಲ್ದಾಣಕ್ಕೆ ರಸ್ತೆ: ಸಮ್ಮತಿ

ಬಹುಬೇಡಿಕೆಯ ನಾಗಸಂದ್ರ– ಬಿಐಇಸಿ (ರೀಚ್– 3 ವಿಸ್ತರಣೆ) ತನಕದ 3.14 ಕಿ.ಮೀ. ಮಾರ್ಗದಲ್ಲಿ ಭೂಸ್ವಾಧೀನ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

ಜಿಂದಾಲ್‌–ಪ್ರೆಸ್ಟೀಜ್‌ ಲೇಔಟ್‌ ಮೂಲಕ ಅಂಚೆಪಾಳ್ಯ ಹಾಗೂ ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ರದ್ದುಗೊಂಡಿತ್ತು. ಈಗ ಪ್ರೆಸ್ಟೀಜ್‌ ಸಂಸ್ಥೆಯು ತನ್ನ ಪ್ರದೇಶದಲ್ಲಿ 12.5 ಅಡಿ ಅಗಲದ ರಸ್ತೆ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ನೀಡುವುದಾಗಿ ತಿಳಿಸಿದೆ. ಸಮಸ್ಯೆ ಇತ್ಯರ್ಥವಾಗಿದೆ. ಈ ಮಾರ್ಗದಲ್ಲಿ ರೈಲು ಓಡಾಟ ಆರಂಭವಾದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

‘ನೈಸ್‌ ರಸ್ತೆ ಸೇರಿ ಹಲವು ಅಡ್ಡಿ–ಆತಂಕಗಳು ಎದುರಾಗಿದ್ದವು. ಒಂದೊಂದೇ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ. ಈ ವರ್ಷಾಂತ್ಯದಲ್ಲಿ ನಾಗಸಂದ್ರ– ಬಿಐಇಸಿ ನಡುವೆ ಮೆಟ್ರೊ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.