ಬಿಬಿಎಂಪಿ
ಬೆಂಗಳೂರು: ತೆರಿಗೆ ಸುಸ್ತಿದಾರರ ಆಸ್ತಿಯನ್ನು ಹರಾಜು ಮಾಡುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಹುತೇಕ ಮಾಲೀಕರು ತೆರಿಗೆಯನ್ನು ಪಾವತಿಸಿದ್ದಾರೆ.
ಬಿಬಿಎಂಪಿಯ ಎಂಟು ವಲಯಗಳಲ್ಲಿ ದೀರ್ಘ ಕಾಲದಿಂದ ಆಸ್ತಿ ತೆರಿಗೆ ಪಾವತಿಸದ 608 ಆಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ಬಿಬಿಎಂಪಿ ಆರಂಭಿಸಿತ್ತು. ಆರಂಭದಲ್ಲಿ, ಫೆಬ್ರುವರಿ 13ರಂದು ನಡೆದಿದ್ದ ಹರಾಜು ಪ್ರಕ್ರಿಯೆಗೆ ಬಿಡ್ಡುದಾರರೇ ಬಂದಿರಲಿಲ್ಲ. ಫೆ.14ರಂದು ನಡೆಯಬೇಕಾಗಿದ್ದ ಹರಾಜು ಪ್ರಕ್ರಿಯೆಗೆ ಮುನ್ನವೇ ಬಹುತೇಕ ಆಸ್ತಿ ಮಾಲೀಕರು ಬಾಕಿ ತೆರಿಗೆಯನ್ನು ಪಾವತಿಸಿದ್ದಾರೆ.
‘ಹರಾಜು ಪ್ರಕ್ರಿಯೆಯನ್ನು ಪಾಲಿಕೆ ವತಿಯಿಂದ ಆರಂಭಿಸಲಾಗಿತ್ತು. ಈ ಸಂದರ್ಭದಲ್ಲೇ, ಹರಾಜು ನೋಟಿಸ್ ಪಡೆದಿದ್ದ ಬಹುತೇಕರು ತೆರಿಗೆ ಪಾವತಿಸಿದ್ದಾರೆ. ಉಳಿದವರು ಕೂಡಲೇ ಪಾವತಿಸುತ್ತೇವೆ ಎಂದೂ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಆಸ್ತಿ ಹರಾಜು ಆಗಿಲ್ಲ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಆಸ್ತಿ ಪಾವತಿ ಮಾಡದ ಇನ್ನೂ ಮೂರು ಸಾವಿರ ಆಸ್ತಿಗಳನ್ನು ಹರಾಜು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಸುಸ್ತಿದಾರರು ಈಗಲಾದರೂ ಎಲ್ಲ ತೆರಿಗೆಯನ್ನು ಪಾವತಿಸಬೇಕು. ಇಲ್ಲದಿದ್ದರೆ ಹಲವು ರೀತಿಯ ದಂಡ ತೆರಬೇಕಾಗುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.