ADVERTISEMENT

ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಗೆ ಜನಾಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 19:56 IST
Last Updated 12 ಫೆಬ್ರುವರಿ 2025, 19:56 IST
ನಮ್ಮ ಮೆಟ್ರೊ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಜನಸಂದಣಿ (ಸಾಂದರ್ಭಿಕ ಚಿತ್ರ)
ನಮ್ಮ ಮೆಟ್ರೊ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಜನಸಂದಣಿ (ಸಾಂದರ್ಭಿಕ ಚಿತ್ರ)   

‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಎಷ್ಟು ಹೆಚ್ಚಳ ಮಾಡಿದೆ ಎಂಬ ಬಗ್ಗೆ ಲೆಕ್ಕಾಚಾರ ಇಲ್ಲದೇ ಮೆಟ್ರೊದಲ್ಲಿ ಪ್ರಯಾಣಿಸಿದಾಗ ಬೆಲೆ ದುಪ್ಪಟ್ಟಾಗಿರುವುದನ್ನು ಕಂಡು ಪ್ರಯಾಣಿಕರು ಅವಕ್ಕಾಗಿದ್ದಾರೆ. ದುಬಾರಿ ದರ ನಿಗದಿ ಮಾಡಿರುವುದನ್ನು ಖಂಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

–––

ಮೆಟ್ರೊ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಯಾಗಿದೆ. ಪ್ರಯಾಣ ದರ ಏರಿಕೆಗೆ ಒಬ್ಬರನ್ನೊಬ್ಬರು ದೂಷಿಸುತ್ತಾ ಜನರಿಗೆ ಟೋಪಿ ಹಾಕುವುದು ಸುಲಭ. ಇಂದಿನ ಅಗತ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡುವುದು. ಖಾಸಗಿ ವಾಹನಗಳ ಸಂಖ್ಯೆ ಕಡಿಮೆ ಮಾಡುತ್ತಾ ಕೆಲವರಿಗೆ ಮಾತ್ರ ಅನುಕೂಲವಾಗುವ ರಸ್ತೆಗಳ ಮೇಲಿನ ಹೂಡಿಕೆಯನ್ನು ನಗರ ಪ್ರದೇಶಗಳಲ್ಲಿ ಕಡಿಮೆ ಮಾಡಬೇಕು. ಪರಿಸರ ಮಾಲಿನ್ಯ, ಅಪಘಾತಗಳು, ವಾಹನ ದಟ್ಟಣೆ ಕಡಿಮೆ ಮಾಡುವ ಕುರಿತು ಸಾರ್ವಜನಿಕ ಸಾರಿಗೆಯನ್ನು ಜನಸ್ನೇಹಿಯನ್ನಾಗಿ ಮಾಡಬೇಕು.
ಗುರುರಾಜ ಹ. ನಾಯಕ, ರಾಘವೇಂದ್ರ ಬಡಾವಣೆ ಬನ್ನೇರುಘಟ್ಟ ರಸ್ತೆ
ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸಂಚರಿಸುವ ಮೆಟ್ರೊ ಪ್ರಯಾಣದ ಕನಿಷ್ಠ ದರ ₹5 ರಿಂದ ಆರಂಭವಾಗಿ ಗರಿಷ್ಠ ₹ 50ರವರೆಗೆ ಇದೆ. ಆದರೆ ನಮ್ಮ ಮೆಟ್ರೊ ಕನಿಷ್ಠ ದರ ₹ 10ರಿಂದ ಗರಿಷ್ಠ ₹90ರವರೆಗೆ ಇದೆ. ಸಾರ್ವಜನಿಕರು ದುಪ್ಪಟ್ಟು ಪ್ರಯಾಣ ದರ ಪಾವತಿಸಬೇಕಾಗಿದೆ. ಈ ದರ ಹೆಚ್ಚಳದಿಂದ ಜನ ಮರಳಿ ಸ್ವಂತ ವಾಹನ ಬಳಕೆಗೆ ಮುಂದಾಗಲಿದ್ದು, ಮತ್ತೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಲಿದೆ. ಇದಕ್ಕೆ ಯಾರು ಹೊಣೆ? ನಮ್ಮ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.
ಕೌಡ್ಲೆ ರವಿ, ಅಂಜನಾನಗರ
ಮೆಟ್ರೊ ಪ್ರಯಾಣ ದರ ಏರಿಕೆ ಆದೇಶ ಹಿಂಪಡೆಯದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಬಿಜೆಪಿ ಶಾಸಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ದರ ಏರಿಕೆ ಕೇಂದ್ರ ಸರ್ಕಾರದಿಂದಲೇ ನಡೆದಿದೆ ಎಂದು ರಾಜ್ಯ ಸರ್ಕಾರ ಸಮಜಾಯಿಷಿ ನೀಡುತ್ತಿದೆ. ಇವರಿಬ್ಬರ ಜಗಳದಲ್ಲಿ ಪ್ರಯಾಣಿಕರ ಜೇಬು ಖಾಲಿ ಆಗುತ್ತಿದೆ. ಈ ರಾಜಕಾರಣಿಗಳೇನು ಜನರನ್ನು ಕೋತಿಗಳೆಂದು ಭಾವಿಸಿದ್ದಾರೆಯೆ? ಕೂಡಲೇ ಈ ಕೋತಿಯಾಟ ನಿಲ್ಲಿಸಲಿ. ನಿಜವಾದ ಕಾಳಜಿಯಿದ್ದರೆ, ಇಬ್ಬರೂ ಒಟ್ಟಿಗೆ ಕೂತು ಚರ್ಚಿಸಿ, ಮೆಟ್ರೊ ಪ್ರಯಾಣ ದರ ಏರಿಕೆಯನ್ನು ಕಡಿಮೆ ಮಾಡಿಸಬೇಕು.
ತಾ.ಸಿ. ತಿಮ್ಮಯ್ಯ, ಎಂಪಿಎಂ ಬಡಾವಣೆ, ಮಲ್ಲತ್ತಹಳ್ಳಿ
ಇತ್ತೀಚೆಗೆ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಮೆಟ್ರೊ ಪ್ರಯಾಣ ದರ ಏರಿಕೆಯು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ಸಾರ್ವಜನಿಕ ಸಾರಿಗೆಯ ಬಳಕೆ ಕಡಿಮೆ ಮಾಡಿ ಸ್ವಂತ ವಾಹನಗಳ ಬಳಕೆಗೆ ಉತ್ತೇಜಿಸುತ್ತಿದೆ. ಜನರನ್ನು ಆರ್ಥಿಕ ಸಂಕಷ್ಟಕ್ಕೂ ದೂಡುತ್ತದೆ. ಬೆಂಗಳೂರು ನಗರದಲ್ಲಿ ವಾಯು ಮತ್ತು ಶಬ್ಧ ಮಾಲಿನ್ಯ ಹೆಚ್ಚಾಗಲಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮೆಟ್ರೊ ಪ್ರಯಾಣ ದರ ಏರಿಕೆಗೆ ಎಲ್ಲ ವರ್ಗದ ಜನರಿಂದ ವಿರೋಧವಿದೆ. ಸಂಬಂಧಪಟ್ಟವರು ಕೂಡಲೇ ದರ ಏರಿಕೆಯ ಬಗ್ಗೆ ಪರಿಶೀಲಿಸಿ ಸಾರ್ವಜನಿಕ ಸ್ನೇಹಿ ದರವನ್ನು ನಿಗದಿಪಡಿಸಬೇಕು.
ನವೀನ್ ಮಾರಾ, ವಿಜಯನಗರ
ಮೆಟ್ರೊ ಪ್ರಯಾಣಕ್ಕೆ ಈ ಹಿಂದೆ ₹57 ಪಾವತಿ ಮಾಡುತ್ತಿದೆ. ಈಗ ಅದೇ ಮಾರ್ಗಕ್ಕೆ ₹90 ಪಾವತಿಸಬೇಕಾಗಿದೆ. ಇದು ನಮ್ಮಂತಹ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ದೊಡುತ್ತದೆ. ಮೆಟ್ರೊ ಒಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಇದನ್ನು ಲಾಭಕ್ಕೆ ಬಳಸುವ ಬದಲು ಜನಸ್ನೇಹಿ ದರದಲ್ಲಿ ಮುಂದುವರಿಸಬೇಕು. ಈ ದರ ಏರಿಕೆಯಿಂದ, ದೊಡ್ಡ ಸಂಖ್ಯೆಯ ಜನರು ಮೆಟ್ರೊ ಬಿಟ್ಟು ವೈಯಕ್ತಿಕ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದು ಮತ್ತೆ ಸಂಚಾರ ದಟ್ಟಣೆಗೆ ಕಾರಣವಾಗಲಿದೆ.
ಕಿಶೋರ್, ಖಾಸಗಿ ನೌಕರ
ಮೆಟ್ರೊ ರೈಲಿನ ದೈನಂದಿನ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಪ್ರಯಾಣದ ದರ ಹೆಚ್ಚಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಸಂಸ್ಥೆಯು ಸಬೂಬು ಹೇಳುತ್ತಿದೆ. ಆದರೆ ಇದರ ಇತರೆ ವೆಚ್ಚಗಳನ್ನು ಕಡಿಮೆಗೊಳಿಸಬೇಕು. ಬಿಎಂಆರ್‌ಸಿಎಲ್‌ಗೆ ಮೆಟ್ರೊ ನಿಲ್ದಾಣಗಳ ನಿರ್ಮಾಣದ ವೆಚ್ಚವೇ ಹೊರೆಯಾಗಿದೆ. ಎರಡು ಮೂರು ಕಿ.ಮೀ ಅಂತರದಲ್ಲಿ 3-4 ನಿಲ್ದಾಣಗಳ ಅವಶ್ಯಕತೆ ಇದೆಯೆ? ಅವೈಜ್ಞಾನಿಕವಾಗಿ ಮೆಟ್ರೊ ನಿಲ್ದಾಣಗಳನ್ನು ನಿರ್ಮಿಸುವುದನ್ನು ಕೈಬಿಟ್ಟು, ವೆಚ್ಚ ಕಡಿಮೆ ಮಾಡಬೇಕು.
ಅನಿಲ್ ಕುಮಾರ್ ಬಿ.ಎ., ಗಿರಿನಗರ
ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣದಿಂದ ಕಬ್ಬನ್‌ ಉದ್ಯಾನ ಮೆಟ್ರೊ ನಿಲ್ದಾಣಕ್ಕೆ ಈ ಹಿಂದೆ ನಾನು ₹47.50 ಪ್ರಯಾಣ ದರವನ್ನು ಪಾವತಿ ಮಾಡುತ್ತಿದೆ. ಈಗ ಅದೇ ಮಾರ್ಗದ ಪ್ರಯಾಣ ದರವನ್ನು ₹66.50ಕ್ಕೆ ಏರಿಕೆ ಮಾಡಲಾಗಿದೆ. ನಮ್ಮಂತಹ ಮಧ್ಯಮ ವರ್ಗದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರಗಳು ದರ ಏರಿಕೆ ಮಾಡುವ ಮುನ್ನ ನಮ್ಮಂತಹವರ ಬಗ್ಗೆ ಯೋಚನೆ ಮಾಡಬೇಕು. ಮೆಟ್ರೊ ಪ್ರಯಾಣ ದರ ಹೆಚ್ಚಳ ತೀರಾ ಅನಿವಾರ್ಯವಾಗಿದ್ದಲ್ಲಿ ಶೇಕಡ 5ರಷ್ಟು ಹೆಚ್ಚಿಸಬಹುದಿತ್ತು. ಅದನ್ನು ಬಿಟ್ಟು ಅವೈಜ್ಞಾನಿಕ ರೀತಿಯಲ್ಲಿ ಮೆಟ್ರೊ ಪ್ರಯಾಣ ದರ ಹೆಚ್ಚಿಸಿರುವುದು ಸರಿಯಲ್ಲ. 
ನಳಿನಿಗೌಡ, ಮಾತೃಶ್ರೀ ಬಡಾವಣೆ, ತೋಟದಗುಡ್ಡಹಳ್ಳಿ
‘ನಮ್ಮ ಮೆಟ್ರೊ’ ಹೆಸರನ್ನೂ ‘ಬಿಎಂಆರ್‌ಸಿಎಲ್ ಮೆಟ್ರೊ’ ಎಂದು ಬದಲಿಸಿದರೆ ಸೂಕ್ತ. ಪ್ರಯಾಣ ದರ ಹೆಚ್ಚಳದಲ್ಲಿ ‘ನಮ್ಮ’ ಅಸ್ತಿತ್ವದ ಒಂದು ಅಂಶವನ್ನೂ ಸಹ ಪರಿಗಣಿಸದ ಮೆಟ್ರೊ ‘ನಮ್ಮ ಮೆಟ್ರೊ’ ಆಗಲು ಹೇಗೆ ಸಾಧ್ಯ? ದೇಶದಲ್ಲಿ ಅತ್ಯಂತ ದುಬಾರಿ ಮೆಟ್ರೊ ಎಂಬ ಕುಖ್ಯಾತಿಗೆ ‘ನಮ್ಮ’ ಹೆಸರನ್ನು ಏಕೆ ಬಳಸುತ್ತೀರಿ? ಬದಲಿಸಿಬಿಡಿ. ಹಾಗೆಯೇ, ‘ದರ ಏರಿಕೆಗೆ ನೀವು ಕಾರಣ ನಾವಲ್ಲ’ ಎಂದು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಈ ನಾಟಕವನ್ನು ಕೈಬಿಡಬೇಕು. ಸಾರ್ವಜನಿಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಮೆಟ್ರೊ ಪ್ರಯಾಣ ದರ ಕಡಿತಗೊಳಿಸಬೇಕು.
ನಿರ್ಮಲಾ ಎಚ್.ಎಲ್., ಮಲೇಶ್ವರ
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಿಕೊಳ್ಳಲು ಹಾಗೂ ನಿಗದಿತ ಸಮಯಕ್ಕೆ ಕಚೇರಿ ತಲುಪಲು ಮೆಟ್ರೊ ರೈಲಿನಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಾರೆ. ನಾನು ಸಹ ಜ್ಞಾನಭಾರತಿಯಿಂದ ಕಾಡುಗೋಡಿಯವರೆಗೆ ಮೆಟ್ರೊದಲ್ಲಿ ಪ್ರತಿನಿತ್ಯ ಪ್ರಯಾಣಿಸುತ್ತಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಚೆನ್ನಾಗಿ ಗೊತ್ತಿದೆ. ಬೆಂಗಳೂರಿನ ಜನ ಈ ಬೆಲೆ ಏರಿಕೆಯ ಬಗ್ಗೆ ಹೆಚ್ಚು ದಿನ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು. ಮೆಟ್ರೊ ಪ್ರಯಾಣ ದರವನ್ನು ಕಡಿತಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಹೋರಾಟಕ್ಕೆ ಇಳಿಯುವ ಅವಶ್ಯಕತೆ ಇದೆ. 
ಸಿದ್ದರಾಜು ಎನ್.ಆರ್., ಜ್ಞಾನಭಾರತಿ

-0-

ADVERTISEMENT
ಮೆಟ್ರೊ ರೈಲಿನ ಒಂದು ಬೋಗಿಯಲ್ಲಿ ಗರಿಷ್ಠ 50 ಸೀಟುಗಳು ಇರುತ್ತವೆ. ಆದರೆ ಪ್ರತಿ ಬೋಗಿಯಲ್ಲೂ ಸೀಟುಗಳಿಗೆ ಹೋಲಿಸಿದರೆ ಕನಿಷ್ಠ ಮೂರರಿಂದ ನಾಲ್ಕು ಪಟ್ಟು ಜನ ಪ್ರಯಾಣಿಸುತ್ತಾರೆ. ಇದರ ಅರ್ಥ ಒಂದು ರೈಲು ಸಂಚರಿಸಿದರೆ ಬಿಎಂಆರ್‌ಸಿಎಲ್‌ಗೆ ಮೂರರಿಂದ ನಾಲ್ಕು ಪಟ್ಟು ಲಾಭ ಪಡೆಯುತ್ತಿದೆ. ಪ್ರತಿ ಬೋಗಿಯಲ್ಲಿನ ಒಟ್ಟು ಸೀಟುಗಳ ಆಧಾರ ಮೇಲೆ ಮೆಟ್ರೊ ಪ್ರಯಾಣದ ಮೂಲ ದರ ನಿಗದಿಪಡಿಸಲಾಗುತ್ತದೆ. ಇದರಿಂದ ಸಂಸ್ಥೆಗೆ ಯಾವುದೇ ರೀತಿಯ ನಷ್ಟ ಸಾಧ್ಯವಿಲ್ಲ. ಈಗ ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದು ಸಂಪೂರ್ಣ ಅಸಂಮಜಸವಾಗಿದೆ. ದರ ಏರಿಕೆಗೆ ಕೇಂದ್ರದ ಕಡೆ ಬೆರಳು ತೋರಿಸುವ ಬದಲು ದರ ಏರಿಕೆಯನ್ನು ಮುಖ್ಯಮಂತ್ರಿಯವರು ಜನತೆಯ ಪರವಾಗಿ ಏಕೆ ವಿರೋಧಿಸುತ್ತಿಲ್ಲ? 
ಎನ್.ಸಿ. ಶ್ರೀನಿವಾಸ, ಮಾಜಿ ಮುಖ್ಯ ಮಾಹಿತಿ ಆಯುಕ್ತ

–0–

ನಮ್ಮ ಮೆಟ್ರೊ ಪ್ರಯಾಣ ದರವನ್ನು ಹೆಚ್ಚಿಸಿರುವುದು ಖಂಡನೀಯ. ಸಾರ್ವಜನಿಕ ಸಾರಿಗೆ ಎಂದರೆ ಸರ್ಕಾರ ಜನರಿಗೆ ನೀಡಬೇಕಾದ ಮೂಲ ಸೌಲಭ್ಯವಾಗಿದೆ. ಇದು ಲಾಭರಹಿತ ಸೇವೆ ಆಗಬೇಕು. ಮೆಟ್ರೊ ಪರಿಸರ ಸ್ನೇಹಿ ಆಗಿರುವುದರಿಂದ ಸರ್ಕಾರ ಈ ಸಂಸ್ಥೆಗೆ ಹೆಚ್ಚು ಅನುದಾನ ನೀಡಿ, ಪ್ರಯಾಣ ದರವನ್ನು ಕನಿಷ್ಠ ಮಟ್ಟಕ್ಕೆ ಇಳಿಸಬೇಕು. 
ಪರಿಸರ ಚಂದ್ರಶೇಖರ, ಬಸವನಗುಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.