ADVERTISEMENT

ಪಿಐಟಿ–ಎನ್‌ಡಿಪಿಎಸ್ ಕಾಯ್ದೆ: ಡ್ರಗ್ಸ್ ಆರೋಪಿ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 19:33 IST
Last Updated 2 ಜುಲೈ 2022, 19:33 IST
   

ಬೆಂಗಳೂರು: ಡ್ರಗ್ಸ್ ಮಾರಾಟವನ್ನೇ ವೃತ್ತಿ ಮಾಡಿಕೊಂಡು ಯುವಸಮೂಹವನ್ನು ಮಾದಕ ವ್ಯಸನಿಗಳಾಗಿ ಮಾಡುತ್ತಿದ್ದ ಆರೋಪದಡಿ ಜೆ. ನಾರಾಯಣ (42) ಎಂಬುವರನ್ನು ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಾಣಿಕೆ ತಡೆ (ಪಿಐಟಿ–ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

‘ಮಾಗಡಿ ರಸ್ತೆ ನಿವಾಸಿ ನಾರಾಯಣ, ಹಲವು ವರ್ಷಗಳಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ. ನಂದಿನಿ ಲೇಔಟ್ ಹಾಗೂ ಶ್ರೀರಾಮಪುರ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ, ಪುನಃ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶ್ರೀರಾಮಪುರ ಹಾಗೂ ಸುತ್ತಮತ್ತಲಿನ ಪ್ರದೇಶಗಳಲ್ಲಿ ಡ್ರಗ್ಸ್ ಮಾರುತ್ತಿದ್ದ ನಾರಾಯಣ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ. ಜಾಮೀನು ಷರತ್ತುಗಳನ್ನೂ ಉಲ್ಲಂಘಿಸುತ್ತಿದ್ದ. ಹೀಗಾಗಿ, ಈತನನ್ನು ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲು ಕೋರಿ ಕಮಿಷನರ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ನೀಡಿರುವ ಕಮಿಷನರ್, ತಮ್ಮ ಅಧಿಕಾರ ಚಲಾಯಿಸಿ ಆರೋಪಿಯನ್ನು ಒಂದು ವರ್ಷ ಜೈಲಿನಲ್ಲಿಡಲು ಆದೇಶಿಸಿದ್ದಾರೆ’ ಎಂದು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.