ADVERTISEMENT

ಮೀನು ತಿಂದವರನ್ನು ನೋಡಿ, ಮೊಸಳೆ ತಿಂದವರ ಕೇಕೆ...

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 12:48 IST
Last Updated 10 ನವೆಂಬರ್ 2019, 12:48 IST
ಪ್ರತಿಭಾ ನಂದಕುಮಾರ್
ಪ್ರತಿಭಾ ನಂದಕುಮಾರ್   

ಬೆಂಗಳೂರು: ಕವಯಿತ್ರಿ ಪ್ರತಿಭಾ ನಂದಕುಮಾರ್‌ ಅವರು ತಮ್ಮ ಕವಿತೆಗಳ ಮೂಲಕವೇ ಸಮಾಜವ ಅಪಸವ್ಯಗಳ ಬಗ್ಗೆ ಚಾಟಿ ಬೀಸಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಅವರು ಸ್ವರಚಿತ ಕವನ ವಾಚನ ಮಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೀನು ತಿಂದು ಧರ್ಮಸ್ಥಳದ ದೇವಸ್ಥಾನಕ್ಕೆ ಹೋದ ವಿಚಾರ ಸೃಷ್ಟಿಸಿದ ವಿವಾದ, ಸಚಿವರೊಬ್ಬರು ಹುಡುಗಿಯರು ಸ್ಕರ್ಟ್‌ ತೊಡಬಾರದು ಎಂದು ಹೇಳಿಕೆ ನೀಡಿದ್ದು ಪ್ರತಿಭಾ ಅವರ ಕವಿತೆಯ ವಿಷಯಗಳಾದವು.

ADVERTISEMENT

‘ಇದು ತಿನ್ನಬಾರದ ಮೀನು, ಕಹಿಯಾಯಿತು ಜೇನು

ಮುಟ್ಟಬಾರದ ಮೈ, ತಟ್ಟಲಾಗದ ಕೈ

ಮೀನು ತಿಂದವರನ್ನು ನೋಡಿ, ಮೊಸಳೆ ತಿಂದವರ ಕೇಕೆ

ಬೇಕಿತ್ತಾ ನಿನಗೆ ಮಂಜುನಾಥಾ?’

ಎಂದು ‘ಎದ್ದೇಳು ಮಂಜುನಾಥ’ ಕವನದ ಸಾಲುಗಳ ಮೂಲಕವೇ ಪ್ರಶ್ನಿಸಿದರು.

‘ಕಾಮಿತಾರ್ಥ ಪ್ರದಾಯನ ಸ್ವಚ್ಛಭಾರತದಲ್ಲಿ ಮಗ್ನ

ಕಾಷಾಯ ವಸ್ತ್ರಧಾರಿ ಹೆಜ್ಜೆಹೆಜ್ಜೆಗೂ ನಗ್ನ

ಧರ್ಮರಕ್ಷಕರಂತೆ ಸ್ಖಲನವೀರರು

ಕೂಗುಮಾರಿಗಳು ಇವರೇ ದಂಡಪಿಂಡಗಳು’ ಎಂದು ಧಮರ್ದ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ಟೀಕಿಸಿದರು.

ಸ್ಕರ್ಟ್‌ ತೊಟ್ಟರೆ ಹುಡುಗಿ

ಹೊರಬೇಕಾಗುತ್ತದೆ ಸಂಸ್ಕೃತಿಯ ಶಿಲುಬೆ

ಸಂಸತ್ತಿನಲ್ಲಿ ಗಲಭೆ

ಫೇಸ್‌ಬುಕ್ಕಿನಲ್ಲಿ ಕೆಟ್ಟ ದುರ್ನಾತದ ಹಬೆ

ಆದರೆ, ಹುಡುಗಿ ಸ್ಕರ್ಟು ತೊಡುತ್ತಾಳೆ

ನಿರ್ಭಯವಾಗಿ ಬೀದಿಯಲ್ಲಿ ಸುತ್ತುತ್ತಾಳೆ

ದೇವಸ್ಥಾನದೊಳಗೂ ಕಾಲಿಡುತ್ತಾಳೆ

ಅಂಗಳವಿಲ್ಲದ ಮನೆಯ ಕಾಣದ ಬೇಲಿಯ ದಾಟಿ

ಗಾಢ ಪರಿಮಳವಾಗಿ ಗಾಳಿಯಲ್ಲಿ ತೇಲಿ

ಊರ ತುಂಬಾ ಹರಡಿಕೊಳ್ಳುತ್ತಾಳೆ

ಟೀಕಾಚಾರ್ಯರು ಅವಳ ಸ್ಕರ್ಟಿನ

ಅಂಚಿನಲ್ಲಿ ಹೊರಳಿ ಕೊಳೆಯಾಗಿ

ವಾಷಿಂಗ್‌ಮೆಷಿನ್ನಿನಲ್ಲಿ ತೊಳೆದು ಹೋಗುತ್ತಾರೆ

ಗಟಾರು ಸೇರುತ್ತಾರೆ.

ಎಂದು ‘ಸ್ಕರ್ಟು ತೊಟ್ಟ ಹುಡುಗಿಗೆ’ ಕವನದ ಸಾಲುಗಳ ಮೂಲಕವೇ ಹುಡುಗಿಯರ ವಸ್ತ್ರದ ಬಗ್ಗೆಯೂ ತಗಾದೆ ತೆಗೆಯುವವರಿಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.