ADVERTISEMENT

ರಸ್ತೆಯಲ್ಲಿ ಉರುಳಿಬಿದ್ದ ಪೊಲೀಸ್‌ ಜೀಪು

ಅಪಘಾತದಲ್ಲಿ ಜಖಂಗೊಂಡ ಕ್ಯಾಬ್ l ಸಿಸಿಬಿಯ ಡಿಸಿಪಿಗೆ ಸೇರಿದ್ದ ವಾಹನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:35 IST
Last Updated 2 ಮಾರ್ಚ್ 2020, 19:35 IST
ರಸ್ತೆಯಲ್ಲಿ ಉರುಳಿಬಿದ್ದಿದ್ದ ಜೀಪು
ರಸ್ತೆಯಲ್ಲಿ ಉರುಳಿಬಿದ್ದಿದ್ದ ಜೀಪು   

ಬೆಂಗಳೂರು: ಎಂ.ಜಿ.ರಸ್ತೆಯ ಟ್ರಿನಿಟಿ ವೃತ್ತದಲ್ಲಿ ಪೊಲೀಸ್ ಜೀಪೊಂದು ಕ್ಯಾಬ್‌ಗೆ ಗುದ್ದಿ ರಸ್ತೆಯಲ್ಲೇ ಉರುಳಿಬಿದ್ದಿದ್ದು, ಜೀಪಿನ ಚಾಲಕ ಶ್ರೀಧರ್‌ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

‘ಸೋಮವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಸಿಸಿಬಿಯ ಡಿಸಿಪಿ ಕುಲದೀಪ್‌ಕುಮಾರ್ ಜೈನ್ ಅವರಿಗೆ ಇಲಾಖೆ ಜೀಪು ನೀಡಿತ್ತು. ಈ ಜೀಪಿನಲ್ಲಿ (ಕೆಎ 51 ಜಿ 007) ಚಾಲಕ ಶ್ರೀಧರ್ ಮಾತ್ರ ಇದ್ದರು’ ಎಂದು ಹಲಸೂರು ಸಂಚಾರ ಠಾಣೆ ಪೊಲೀಸರು ಹೇಳಿದರು.

ಅಪಘಾತದ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಯೊಬ್ಬರು, ‘ಎಂ.ಜಿ. ರಸ್ತೆ ಟ್ರಿನಿಟಿ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು. ಅತೀ ವೇಗವಾಗಿ ಜೀಪು ಚಲಾಯಿಸಿಕೊಂಡು ಬಂದಿದ್ದ ಶ್ರೀಧರ್, ಎದುರಿಗಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆಸಿದರು. ಅದರ ರಭಸಕ್ಕೆ ಕ್ಯಾಬ್‌ ಪಾದಚಾರಿ ಮಾರ್ಗಕ್ಕೆ ಹೋಗಿ ಕಂಬಕ್ಕೆ ಗುದ್ದಿತು. ಪೊಲೀಸ್ ಜೀಪು ರಸ್ತೆಯಲ್ಲೇ ಉರುಳಿಬಿತ್ತು’ ಎಂದರು.

ADVERTISEMENT

‘ಚಾಲಕ ಶ್ರೀಧರ್ ಅತೀವೇಗವಾಗಿ ಜೀಪು ಚಲಾಯಿಸಿದ್ದೇ ಅವಘಡಕ್ಕೆ ಕಾರಣ.ಜೀಪು ಹಾಗೂ ಕ್ಯಾಬ್ ಎರಡೂ ಜಖಂಗೊಂಡಿವೆ. ಅಪಘಾತದಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಸಂಚಾರ ದಟ್ಟಣೆ ಕಂಡುಬಂತು. ಸ್ಥಳಕ್ಕೆ ಬಂದ ಹಲಸೂರು ಸಂಚಾರ ಪೊಲೀಸರು, ಜೀಪು ಹಾಗೂ ಕಾರು ತೆರವುಗೊಳಿಸಿದರು’ ಎಂದೂ ಅವರು ಹೇಳಿದರು.

ಹಲಸೂರು ಸಂಚಾರ ಪೊಲೀಸರು, ‘ಡಿಸಿಪಿ ಕುಲದೀಪ್‌ ಕುಮಾರ್ ಜೈನ್ ಅವರಿಗೆ ಇಲಾಖೆಯಿಂದ ಜೀಪು ನೀಡಲಾಗಿತ್ತು. ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಶ್ರೀಧರ್ ಅವರನ್ನು ಚಾಲಕರಾಗಿ ನಿಯೋಜಿಸಲಾಗಿತ್ತು. ನಗರ ಪೊಲೀಸ್ ಕಮಿಷನರ್ ಕಚೇರಿಯತ್ತ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಹೇಳಿದರು.

‘ಜೀಪಿನ ಬ್ರೇಕ್ ವೈಫಲ್ಯವಾಗಿದ್ದರಿಂದ ನಿಯಂತ್ರಣ ಕಳೆದುಕೊಂಡು ಕ್ಯಾಬ್‌ಗೆ ಡಿಕ್ಕಿ ಹೊಡೆಸಿರುವುದಾಗಿ ಚಾಲಕ ಶ್ರೀಧರ್ ಹೇಳುತ್ತಿದ್ದಾರೆ. ಅಪಘಾತ ಸಂಬಂಧ ಕ್ಯಾಬ್ ಚಾಲಕ ಹಾಗೂ ಸ್ಥಳೀಯರ ಹೇಳಿಕೆ ಪಡೆಯಲಾಗುತ್ತಿದೆ. ಎಲ್ಲವನ್ನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.