ADVERTISEMENT

ಅಂಚೆಯಣ್ಣನ ಇತಿಹಾಸ ಹೇಳುವ ಮ್ಯೂಸಿಯಂ

ಭಾರತೀಯ ಅಂಚೆ ವ್ಯವಸ್ಥೆ ನಡೆದು ಬಂದ ಹಾದಿಯ ಮೆಲುಕು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:22 IST
Last Updated 15 ಆಗಸ್ಟ್ 2019, 19:22 IST
ಹಳೇ ಅಂಚೆ ಪೆಟ್ಟಿಗೆಗಳನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಪಾಸ್ಕಲ್ ಅಲನ್ ನಜರತ್, ಖ್ಯಾತ ವ್ಯಂಗ್ಯಚಿತ್ರಕಾರ ಪಾಲ್ ಫರ್ನಾಂಡೀಸ್, ರಾಜ್ಯ ಪ್ರಧಾನ ಮುಖ್ಯ ಪೋಸ್ಟ್‌ ಮಾಸ್ಟರ್‌ ಚಾರ್ಲ್ಸ್‌ ಲೋಬೊ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ
ಹಳೇ ಅಂಚೆ ಪೆಟ್ಟಿಗೆಗಳನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಪಾಸ್ಕಲ್ ಅಲನ್ ನಜರತ್, ಖ್ಯಾತ ವ್ಯಂಗ್ಯಚಿತ್ರಕಾರ ಪಾಲ್ ಫರ್ನಾಂಡೀಸ್, ರಾಜ್ಯ ಪ್ರಧಾನ ಮುಖ್ಯ ಪೋಸ್ಟ್‌ ಮಾಸ್ಟರ್‌ ಚಾರ್ಲ್ಸ್‌ ಲೋಬೊ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಲಗೈಯಲ್ಲಿ ಈಟಿ, ಎಡಗೈಯಲ್ಲಿ ಚಿಮಣಿ ದೀಪ, ಹೆಗಲ ಮೇಲೆ ಅಂಚೆ ಚೀಲ ಹೊತ್ತು ಹಳ್ಳಿಯಿಂದ ಹಳ್ಳಿಗೆ ಅಂಚೆಯಣ್ಣ ನಡೆದೇ ಸಾಗುತ್ತಿದ್ದ ಕಾಲವೊಂದಿತ್ತು...

ಹೌದು, ಕಾಲ್ನಡಿಗೆಯಲ್ಲೇ ಊರೂರು ಸುತ್ತುತ್ತಿದ್ದ ಪೋಸ್ಟ್‌ಮನ್‌ಗಳು ಪತ್ರಗಳನ್ನು ತಲುಪಿಸುತ್ತಿದ್ದರು. ‌ಕ್ಷಣಾರ್ಧದಲ್ಲೇ ಮಾಹಿತಿ ರವಾನೆಯಾಗುವ ಇಂಟರ್‌ನೆಟ್ ಯುಗದಲ್ಲಿ ಈ ಮಾತು ಕೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವವರೇ ಹೆಚ್ಚು. ಅಂಚೆ ಇಲಾಖೆ ನಡೆದು ಬಂದ ದಾರಿ ಮತ್ತು ಇತಿಹಾಸ ಹೇಳುವ ವಸ್ತು ಸಂಗ್ರಹಾಲಯವೊಂದು ನಗರದ ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯಲ್ಲಿ ತೆರೆದುಕೊಂಡಿದೆ.

ಭಾರತೀಯ ಅಂಚೆ ವ್ಯವಸ್ಥೆಯು 1854ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೂ ಇಲಾಖೆ ಕಾರ್ಯನಿರ್ವಹಿಸಿದ ವಿಧಾನವನ್ನು ಈ ಸಂಗ್ರಹಾಲಯ ತೆರೆದಿಟ್ಟಿದೆ.

ADVERTISEMENT

ಆರು ಕೊಠಡಿಗಳ ಪೈಕಿ ಮೊದಲನೇ ಕೊಠಡಿ ‘ಸಂದೇಶ್’ನಲ್ಲಿ ರಾಷ್ಟ್ರದ ಉದಯ, ಭಾರತೀಯ ಸಂಸ್ಕೃತಿ, ಮೈಸೂರು ಅಂಚೆ ಪರಂಪರೆ ಹೇಳುವ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗಿದೆ.

ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು, ಪ್ರಸಿದ್ಧ ಸ್ಥಳಗಳನ್ನು ಒಳಗೊಂಡಿರುವ ಅಂಚೆ ಚೀಟಿಗಳು ಇಲ್ಲಿವೆ. ಪ್ರತಿ ಚೀಟಿಯಲ್ಲೂ ಅದಕ್ಕೆ ಸಂಬಂಧಿಸಿದ ಮಾಹಿತಿಯೂ ಇದೆ. ಆರು ಆಣೆಯ ಅಂಚೆ ಚೀಟಿಯಲ್ಲಿ ಗೋಳಗುಮ್ಮಟ, 2 ಪೈಸೆ ಸ್ಟಾಂಪ್‌ನಲ್ಲಿ ಬಿದಿರುವ ಕಲೆಯ ಕರಕುಶಲ ವಸ್ತುಗಳ ಚಿತ್ರ, 70 ಪೈಸೆ ಸ್ಟಾಂಪ್‌ನಲ್ಲಿ ಹಂಪಿ ಕಲ್ಲಿನ ರಥ, ₹15ರ ಚೀಟಿಯಲ್ಲಿ ರಾಜ್‌ಕುಮಾರ್ ಸೇರಿ ಕನ್ನಡ ಮತ್ತು ಇತರ ಭಾಷೆಗಳ ಚಲನಚಿತ್ರ ನಟರ ಚಿತ್ರಗಳು ಇವೆ. ಇದರೊಂದಿಗೆ ಕುವೆಂಪು, ಆರ್.ಕೆ. ನಾರಾಯಣ, ಕನ್ನಡ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ಇರುವ ಅಂಚೆ ಚೀಟಿಗಳೂ ಇಲ್ಲಿವೆ.

ಎರಡನೇ ಕೊಠಡಿ ‘ಸಂಪರ್ಕ’ದಲ್ಲಿ ಸಂಪರ್ಕ ಸಾಧಿಸಲು ಅಂಚೆ ಇಲಾಖೆ ಬಳಸುತ್ತಿದ್ದ ಹಳೇ ಕಾಲದ ಉಪಕರಣಗಳನ್ನು ಇರಿಸಲಾಗಿದೆ. ಮೂರನೇ ಕೊಠಡಿ ‘ಸಂಪುಟ’ದಲ್ಲಿ ಅಂಚೆ ಕಚೇರಿಯಲ್ಲಿ ಬಳಸಿದ ಹಳೇ ಆದೇಶಗಳ ಪುಸ್ತಕಗಳು, ಬ್ಯಾಗ್‌ಗಳನ್ನು ಇರಿಸಲಾಗಿದೆ. ನಾಲ್ಕನೇ ಕೊಠಡಿ ‘ಸಂವಹನ’ದಲ್ಲಿ ವಿ–ಸ್ಯಾಟ್ ಯಂತ್ರ, ಐದನೇ ಕೊಠಡಿಯಲ್ಲಿ ‘ಸಂಗತಿ’ಯಲ್ಲಿ ತೂಕದ ಯಂತ್ರ, ಮೊಹರುಗಳು, ಮಳೆ ಕೋಟುಗಳು, ಹಲವು ಬಗೆಯ ಬ್ಯಾಗ್‌ಗಳಿವೆ. ಆರನೇ ಕೊಠಡಿ ‘ಸಂಗ್ರಹ’ದಲ್ಲಿ ವಿಶೇಷ ಕವರ್‌ಗಳನ್ನು ಜೋಡಿಸಲಾಗಿದೆ. ವರಾಂಡದಲ್ಲಿ ವಿವಿಧ ಬಗೆಯ ಅಂಚೆ ಪೆಟ್ಟಿಗೆಗಳನ್ನಿಡಲಾಗಿದೆ.

ಸಮಗ್ರ ಚಿತ್ರಣ

ವಸ್ತು ಸಂಗ್ರಹಾಲಯವನ್ನು ನಿವೃತ್ತ ಐಎಫ್‍ಎಸ್ ಅಧಿಕಾರಿ ಪಾಸ್ಕಲ್ ಅಲನ್ ನಜರತ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಹೊಸ ತಂತ್ರಜ್ಞಾನಗಳಿಗೆ ಒಗ್ಗಿರುವ ಪೀಳಿಗೆಗೆ ಅಂಚೆ ಸೇವೆಯ ಸಂವಹನ ಪ್ರಕ್ರಿಯೆಯ ಸಮಗ್ರ ಚಿತ್ರಣವನ್ನು ಈ ಸಂಗ್ರಹಾಲಯ ತಿಳಿಸಲಿದೆ’ ಎಂದರು.

‘ವಸ್ತು ಸಂಗ್ರಹಾಲಯಕ್ಕೆ ಸಾರ್ವಜನಿಕರ ಉಚಿತ ಪ್ರವೇಶಕ್ಕೆ ಅವಕಾಶವಿದೆ. ಅಂಚೆ ಇಲಾಖೆಗೆ ಸಂಬಂಧಿಸಿದ ವಿಶೇಷ ವಸ್ತುಗಳಿದ್ದರೆ ಜನ ನಮಗೆ ನೀಡಬಹುದು. ಅವುಗಳನ್ನು ಸಂಗ್ರಹಾಲಯದಲ್ಲಿ ಇರಿಸಲಾಗುವುದು’ ಎಂದು ಪ್ರಧಾನ ಮುಖ್ಯ ಪೋಸ್ಟ್‌ ಮಾಸ್ಟರ್ ಚಾರ್ಲ್ಸ್ ಲೋಬೊ ತಿಳಿಸಿದರು.

‘ಮೇಘಧೂತ’ ಪ್ರಶಸ್ತಿ ಪುರಸ್ಕೃತ ವಿಕ್ಟರ್ ಧನರಾಜ್ ಅವರನ್ನು ಗೌರವಿಸಲಾಯಿತು. ವಿಶೇಷ ಕವರ್ ಮತ್ತು ಚಿತ್ರಗಳನ್ನು ಒಳಗೊಂಡ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.

***

"ಸಂಗ್ರಹಾಲಯದಲ್ಲಿ ಪ್ರದರ್ಶನಗೊಂಡಿರುವ ಪ್ರತಿಯೊಂದು ವಸ್ತು ಕೂಡ ಅಂಚೆ ಇತಿಹಾಸ ಹೇಳುತ್ತಿದೆ "
– ಪಾಲ್ ಫರ್ನಾಂಡಿಸ್, ವ್ಯಂಗ್ಯಚಿತ್ರಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.