ADVERTISEMENT

ಆನ್‌ಲೈನ್ ವಂಚನೆಗೆ ಸಿಲುಕುವ ವಿದ್ಯಾವಂತರು: ಎಸ್‌ಪಿ ಎಂ.ಡಿ.ಶರತ್ ಕಳವಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:03 IST
Last Updated 27 ಅಕ್ಟೋಬರ್ 2021, 4:03 IST
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಎಂ.ಬಿ.ಗಜಿಬೇಯಿ, ಬೆಂಗಳೂರು ಪ್ರಧಾನ ಕಚೇರಿಯ ಪೋಸ್ಟ್‌ ಮಾಸ್ಟರ್‌ ಜನರಲ್ ಎಲ್.ಕೆ.ಡಾಶ್ ಹಾಗೂ ಪೊಲೀಸ್ ಅಧಿಕಾರಿ ಎಂ.ಡಿ.ಶರತ್ ಭಾಗವಹಿಸಿದ್ದರು. ಪ್ರಶಸ್ತಿ ಪುರಸ್ಕೃತ ಸಿಬ್ಬಂದಿ ರಾಧಾಕೃಷ್ಣ, ಹಿಮಾಂಶು ಚೌಧರಿ, ರಘುನಾಥನ್ ಸುಮುಖ, ಎನ್.ಕೆ.ಮೋಹನ್, ಅಶ್ವತ್ಥನಾರಾಯಣ, ಸೆಲ್ವಿ ಇದ್ದಾರೆ.
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಎಂ.ಬಿ.ಗಜಿಬೇಯಿ, ಬೆಂಗಳೂರು ಪ್ರಧಾನ ಕಚೇರಿಯ ಪೋಸ್ಟ್‌ ಮಾಸ್ಟರ್‌ ಜನರಲ್ ಎಲ್.ಕೆ.ಡಾಶ್ ಹಾಗೂ ಪೊಲೀಸ್ ಅಧಿಕಾರಿ ಎಂ.ಡಿ.ಶರತ್ ಭಾಗವಹಿಸಿದ್ದರು. ಪ್ರಶಸ್ತಿ ಪುರಸ್ಕೃತ ಸಿಬ್ಬಂದಿ ರಾಧಾಕೃಷ್ಣ, ಹಿಮಾಂಶು ಚೌಧರಿ, ರಘುನಾಥನ್ ಸುಮುಖ, ಎನ್.ಕೆ.ಮೋಹನ್, ಅಶ್ವತ್ಥನಾರಾಯಣ, ಸೆಲ್ವಿ ಇದ್ದಾರೆ.   

ಬೆಂಗಳೂರು: ‘ಈ ಡಿಜಿಟಲ್ ಯುಗದಲ್ಲಿ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್‌ ವಂಚನೆಗಳಿಗೆ ಸಿಲುಕುತ್ತಿದ್ದಾರೆ’ ಎಂದು ಸೈಬರ್ ಕ್ರೈಂ ವಿಭಾಗದ ಎಸ್‌ಪಿ ಎಂ.ಡಿ.ಶರತ್ ಕಳವಳ ವ್ಯಕ್ತಪಡಿಸಿದರು.

ಅಂಚೆ ಇಲಾಖೆಯು ಮಂಗಳವಾರ ಆಯೋಜಿಸಿದ್ದ‘ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ’ ಕುರಿತ ಕಾರ್ಯಾಗಾರ ಹಾಗೂ ಪ್ರಾದೇಶಿಕ ಪ್ರಶಸ್ತಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಎಂಬ ದೊಡ್ಡ ಜಾಲ ಬೆಳೆದುಕೊಂಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡು, ಉಡುಗೊರೆ ಕಳಿಸುವ, ಹಣಕ್ಕೆ ಬೇಡಿಕೆ ಇಡುವುದು, ವೈಯಕ್ತಿಕ ಮಾಹಿತಿಗಳನ್ನು ಪಡೆಯುವುದು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು’ ಎಂದರು.

ADVERTISEMENT

‘ಮೊಬೈಲ್‌ಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಹಣ ದೋಚುವ ತಂತ್ರಗಾರಿಕೆ ನಡೆಯುತ್ತಿದ್ದು,ಈ ಕೂಪಕ್ಕೆ ಸಿಲುಕುತ್ತಿರುವವರಲ್ಲಿ ಬುದ್ಧಿವಂತರ ಪಾಲು ಹೆಚ್ಚಿನ ಸಂಖ್ಯೆಯಲ್ಲಿದೆ’ ಎಂದರು.

‘ನಗರ ಪ್ರದೇಶಕ್ಕೆ ಹೋಲಿಸಿದರೆ, ಗ್ರಾಮೀಣ ಭಾಗದವರು ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಸುತ್ತಿಲ್ಲ. ಹಾಗಾಗಿ, ಅವರು ಆನ್‌ಲೈನ್‌ ವಂಚನೆಗಳಿಗೆ ಹೆಚ್ಚಾಗಿ ಸಿಲುಕುವುದಿಲ್ಲ. ಜನರ ಬಳಿಗೆ ಸೇವೆ ನೀಡುವ ಮೂಲಕ ಅವರ ವಿಶ್ವಾಸ ಉಳಿಸಿಕೊಂಡಿರುವ ಅಂಚೆ ಇಲಾಖೆಯು ಈ ಸೈಬರ್‌ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಲು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಅಂಚೆ ಇಲಾಖೆಯ ಬೆಂಗಳೂರು ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಇಲಾಖೆ ಸಿಬ್ಬಂದಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.