ಬೆಂಗಳೂರು: ‘ಕೊರೊನಾ ವೈರಸ್ ಸೋಂಕಿನ ಗುಣಲಕ್ಷಣಗಳು ಅರಿವಿಗೆ ಬರುತ್ತಿದ್ದಂತೆಯೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆತ್ಮವಿಶ್ವಾಸ ಕಳೆದುಕೊಳ್ಳದೇ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಸಲಹೆಗಳನ್ನು ಪಾಲಿಸಿದರೆ ಕೋವಿಡ್ ವಿರುದ್ಧ ಜಯಿಸುವುದು ಸುಲಭ. ತಡಮಾಡದೆ ಪರೀಕ್ಷಿಸಿಕೊಳ್ಳುವುದರಲ್ಲೇ ಮೊದಲ ಹಂತದ ಜಯ ಅಡಗಿರುತ್ತದೆ’ ಎನ್ನುತ್ತಾರೆ ಕೋವಿಡ್‌ನಿಂದ ಗುಣಮುಖರಾಗಿರುವ ಮಹಾಲಕ್ಷ್ಮಿ ಬಡಾವಣೆ ನಿವಾಸಿ ಶಶಿಧರ್.
‘ಏಪ್ರಿಲ್ 3ರ ಸಂಜೆ ನನಗೆ ಮತ್ತು ಪತ್ನಿಗೆ ಇಬ್ಬರಿಗೂ ಜ್ವರ ಕಾಣಿಸಿಕೊಂಡಿತ್ತು. ಕುಟುಂಬ ವೈದ್ಯರ ಬಳಿ ಹೋದಾಗ ಸಾಮಾನ್ಯ ವೈರಾಣು ಜ್ವರದ ಲಕ್ಷಣ ಎಂದು ಔಷಧಿ ನೀಡಿ ಕಳುಹಿಸಿದರು. ಪತ್ನಿಗೆ ಒಂದೇ ದಿನಕ್ಕೆ ಜ್ವರ ಕಡಿಮೆಯಾಯಿತು. ಆದರೆ, ನನಗೆ ಮೂರು ದಿನವಾದರೂ ಜ್ವರ ಇತ್ತು. ಏ.7ಕ್ಕೆ ಬಿಬಿಎಂಪಿ ಕೋವಿಡ್ ಕೇಂದ್ರದಲ್ಲಿ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿಕೊಂಡೆ. ನೆಗೆಟಿವ್ ಎಂದರು. ಆದರೆ, ವರದಿ ನೀಡಿರಲಿಲ್ಲ’ ಎಂದು ಅನುಭವ ಹಂಚಿಕೊಂಡರು.
‘ಮೂರು ದಿನಗಳಾದರೂ ವರದಿ ಬರಲಿಲ್ಲ. ಮತ್ತೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ. ಏ.11ಕ್ಕೆ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಂಡೆ. ಸೋಂಕು ತಗುಲಿದೆ ಎಂಬ ವರದಿ ಏ. 12ಕ್ಕೆ ಬಂತು. ಅದೇ ದಿನ ಬಸವೇಶ್ವರನಗರ ಸಮೀಪದ ಕೆಎಚ್‌ಬಿ ಕಾಲೊನಿಯ ಪುಣ್ಯ ಆಸ್ಪತ್ರೆಗೆ ದಾಖಲಾದೆ. ಹೆಸರಿಗೆ ತಕ್ಕಂತೆ ಅತ್ಯುತ್ತಮ ವೈದ್ಯರು, ಚಿಕಿತ್ಸೆ ದೊರೆಯಿತು. ಡಾ.ನಾಗರಾಜ್ ಮತ್ತು ಡಾ.ನರಸಿಂಹ ಜ್ಞಾನಿ ಆರಂಭದಿಂದಲೇ ವೈದ್ಯರು ಧೈರ್ಯ ತುಂಬಿದರು. ರೆಮ್‌ಡಿಸಿವಿರ್ ಚುಚ್ಚುಮದ್ದು ಸಿಗುವುದು ಒಂದು ದಿನ ತಡವಾಯಿತು. ಬಳಿಕ ಐದು ಡೋಸ್ ನೀಡಿದರು’ ಎಂದು ಆಸ್ಪತ್ರೆಯಲ್ಲಿದ್ದ ದಿನಗಳನ್ನು ವಿವರಿಸಿದರು.
‘ಎರಡನೇ ದಿನದಿಂದಲೇ ನಾನು ಧೈರ್ಯದಿಂದ ಇದ್ದೆ. ಮೊದಲ ದಿನದಿಂದ ಆಮ್ಲಜನಕ ನೀಡಿದ್ದರು. ಕೊನೆಯ ಎರಡು ದಿನ ಆಮ್ಲಜನಕದ ಪೂರೈಕೆ ಇಲ್ಲದೆ ನಿಗಾದಲ್ಲಿ ಇರಿಸಿದ್ದರು. ಏ.19ಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದೆ’ ಎಂದು ತಿಳಿಸಿದರು.
ಆಸ್ಪತ್ರೆಯಿಂದ ಬಂದ ಬಳಿಕ ಒಂದು ವಾರ ಸುಸ್ತು ಇತ್ತು. ಏ.7ಕ್ಕೆ ಸಂಗ್ರಹಿಸಿದ್ದ ಮಾದರಿಯ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಏ.24ರ ಮಧ್ಯ ರಾತ್ರಿ ಬಿಬಿಎಂಪಿ ಕೋವಿಡ್ ಕೇಂದ್ರದವರು ಕರೆಮಾಡಿ ಮಾಹಿತಿ ನೀಡಿದರು. ಈ ವರದಿ ಕಾದಿದ್ದರೆ, ಕತೆ ಬೇರೆಯೇ ಆಗುತ್ತಿತ್ತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.