ADVERTISEMENT

ಪ್ರೀಮಿಯಂ ಎಫ್‌ಎಆರ್‌: ಅರ್ಜಿ ಸ್ವೀಕಾರ ಆರಂಭ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 20:00 IST
Last Updated 16 ಏಪ್ರಿಲ್ 2025, 20:00 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ಮಾಲೀಕರು ಮತ್ತು ಡೆವಲಪರ್‌ಗಳಿಂದ ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತಕ್ಕಾಗಿ (ಎಫ್‌ಎಆರ್) ಅರ್ಜಿ ಸ್ವೀಕಾರ ಆರಂಭಿಸಿದೆ.

ನಿವೇಶನದ ಮಾರ್ಗಸೂಚಿ ದರದ ಶೇಕಡ 50ರಷ್ಟು ಶುಲ್ಕ ಪಾವತಿಸಿಕೊಂಡು, ಶೇ 60ರವರೆಗೂ ಪ್ರೀಮಿಯಂ ಎಫ್‌ಎಆರ್‌ ನೀಡಲು ಅವಕಾಶ ಕಲ್ಪಿಸುವ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಹೊರಡಿಸಿತ್ತು. ಅದರಂತೆ ಬಿಬಿಎಂಪಿಯ ಪಟ್ಟಣ ಯೋಜನಾ ವಿಭಾಗದಿಂದ ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಲು ಶುರು ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ADVERTISEMENT

‘ಅರ್ಜಿಗಳನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸಲು ಮತ್ತು ಪ್ರಕ್ರಿಯೆ ಮುಂದುವರಿಸಲು ನಾವು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇವೆ’ ಎಂದು ಅವರು ವಿವರಿಸಿದರು.

ಸರ್ಕಾರವು ನೀತಿಯ ಕರಡು ಮತ್ತು ಅಂತಿಮ ಅಧಿಸೂಚನೆಗಳನ್ನು ಸಾರ್ವಜನಿಕಗೊಳಿಸಿದ್ದರೂ, ಅರ್ಜಿ ಸ್ವೀಕರಿಸಲು ಆಂತರಿಕವಾಗಿ ಅಳವಡಿಸಿಕೊಂಡ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ಬಿಬಿಎಂಪಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಈ ಮೂಲಕ ₹ 2,000 ಕೋಟಿ ವರಮಾನ ಸಂಗ್ರಹಿಸುವ ಗುರಿಯನ್ನು ಈ ಬಾರಿಯ ಬಜೆಟ್‌ನಲ್ಲಿ ಬಿಬಿಎಂಪಿ ಘೋಷಣೆ ಮಾಡಿದೆ.

‘ಹೊಸ ಪ್ರೀಮಿಯಂ ಎಫ್‌ಎಆರ್ ನೀತಿಯಡಿಯಲ್ಲಿ ಇಲ್ಲಿಯವರೆಗೆ ಯಾವುದೇ ಅನುಮತಿಗಳನ್ನು ನೀಡಲಾಗಿಲ್ಲ. ನಾವು ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದೇವೆ. ನಗರ ಯೋಜನಾ ಇಲಾಖೆಯು ಸಕ್ಷಮ ಪ್ರಾಧಿಕಾರವಾಗಿರುವುದರಿಂದ ಶುಲ್ಕವನ್ನು ಸಂಗ್ರಹಿಸುತ್ತದೆ ಮತ್ತು ಕಟ್ಟಡ ಯೋಜನೆಗಳನ್ನು ಅನುಮೋದಿಸುತ್ತದೆ’ ಎಂದು ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೆ ಕೆಲವು ಬಿಲ್ಡರ್‌ಗಳು ಅಸ್ತಿತ್ವದಲ್ಲಿಲ್ಲದ ಅಗಲವಾದ ರಸ್ತೆಗಳನ್ನು ತೋರಿಸುವ ಮೂಲಕ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದಾರೆ. ಪ್ರೀಮಿಯಂ ಎಫ್‌ಎಆರ್‌ನಿಂದಾಗಿ ನಿಜ ತಿಳಿಯಲಿದೆ. ಪ್ರೀಮಿಯಂ ಎಫ್‌ಎಆರ್‌ ನೀತಿಯು ಬಿಬಿಎಂಪಿ ವ್ಯಾಪ್ತಿ ಮಾತ್ರವಲ್ಲ, ಕನಕಪುರ, ನೆಲಮಂಗಲ ಮತ್ತು ಹೊಸಕೋಟೆ ಸೇರಿದಂತೆ ಸುತ್ತಮುತ್ತಲಿನ ಒಂಬತ್ತು ಉಪನಗರ ಪ್ರದೇಶಗಳಿಗೂ ಅನ್ವಯವಾಗಲಿದೆ.

ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿರುವ ಅಥವಾ ಸಂಪೂರ್ಣವಾಗಿ ನಿರ್ಮಿಸಲಾದ ಕಟ್ಟಡಗಳ ಮಾಲೀಕರಿಂದ ಅರ್ಜಿಗಳನ್ನು ಸ್ವೀಕರಿಸಬಾರದು ಎಂದು ನಾಗರಿಕರು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.