ADVERTISEMENT

ಪ್ರೊ.ಸಿ.ಎನ್‌.ಆರ್‌ ರಾವ್‌ಗೆ ‘ಇನೈ ಎನರ್ಜಿ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:32 IST
Last Updated 23 ಮಾರ್ಚ್ 2022, 19:32 IST
ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ‘ಇನೈ ಎನರ್ಜಿ 2020’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರದಾನ ಮಾಡಿದರು. ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದಾರೆ
ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ‘ಇನೈ ಎನರ್ಜಿ 2020’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರದಾನ ಮಾಡಿದರು. ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದಾರೆ   

ಬೆಂಗಳೂರು: ಜವಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೊಧನಾ ಕೇಂದ್ರದ ಗೌರವಾಧ್ಯಕ್ಷರಾಗಿರುವ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್ ರಾವ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಇನೈ ಎನರ್ಜಿ 2020’ ಪ್ರಶಸ್ತಿಯನ್ನು ಬುಧವಾರ ಪ್ರದಾನ ಮಾಡಿದರು.

ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಾಗಿ ರಾವ್‌ ಅವರಿಗೆ ಈ ಪ್ರತಿಷ್ಠಿತ ದೊರಕಿದೆ. ಇಂಧನ ಕ್ಷೇತ್ರದ ಸಂಶೋಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಇಂಧನ ಸಂಶೋಧನೆಯ ನೋಬೆಲ್‌ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ. ಈ ಪ್ರಶಸ್ತಿ ಪಡೆದ ಏಷ್ಯಾದ ಮತ್ತು ಭಾರತದ ಮೊದಲ ವಿಜ್ಞಾನಿ ಎಂಬ ಹಿರಿಮೆ ರಾವ್‌ ಅವರದು.

ಪ್ರೊ.ರಾವ್‌ ಅವರು ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಇಂಧನ ಮೂಲ ಮಾತ್ರ ಇಡೀ ಮನುಕುಲಕ್ಕೆ ಉಪಯೋಗವಾಗಬಲ್ಲ ಏಕೈಕ ಮೂಲವಾಗಿ ಹೊರಹೊಮ್ಮಿದೆ. ಜಲಜನಕದ ಶೇಖರಣೆ, ದ್ಯುತಿರಸಾಯನ ವಿಜ್ಞಾನ ಮತ್ತು ವಿದ್ಯುದ್ರಸಾಯನ ಕ್ರಿಯೆಯಿಂದಲೂ ಜಲಜನಕ ಉತ್ಪಾದನೆ, ಸೌರಶಕ್ತಿಯಿಂದ ಜಲಜನಕ ಉತ್ಪಾದನೆ ಇವರ ಪ್ರಮುಖ ಸಾಧನೆಗಳಾಗಿವೆ. ಲೋಹದ ಆಕ್ಸೈಡ್‌, ಕಾರ್ಬನ್‌ ನ್ಯಾನೊ ಟ್ಯೂಬ್‌ಗಳು, ಗ್ರಾಫೇನ್, ಬೊರಾನ್–ನೈಟ್ರೋಜನ್‌–ಕಾರ್ಬನ್‌ ಹೈಬ್ರಿಡ್‌ ವಸ್ತುಗಳು, ಮಾಲಿಬ್ಡಿನಮ್ ಸಲ್ಫೈಡ್‌ ಇವುಗಳನ್ನು ಇಂಧನ ಕ್ಷೇತ್ರದಲ್ಲಿ ಅನ್ವಯಗೊಳಿಸಿದ್ದು ಮಾತ್ರವಲ್ಲದೆ, ಹಸಿರು ಜಲಜನಕ ಉತ್ಪಾದನೆಗೆ ಇವರು ಕೊಡುಗೆ ನೀಡಿದ್ದಾರೆ. ಪ್ರಶಸ್ತಿಯ ಆಯ್ಕೆಗೆ ಈ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿತ್ತು.

ADVERTISEMENT

‘ಪ್ರೊ.ಸಿಎನ್ಆರ್ ರಾವ್ ಅವರು ಜ್ಞಾನ ಮತ್ತು ಶಕ್ತಿಯ ಕಣಜ. ಅವರದ್ದು ನಿಸ್ವಾರ್ಥ ಸೇವೆ. ಮನುಷ್ಯನ ಭವಿಷ್ಯದ ಜನಾಂಗಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ವಿಜ್ಞಾನ ಮತ್ತು ಅಧ್ಯಾತ್ಮದ ಪರಿಪೂರ್ಣ ಸಂಯೋಜನೆಯಂತಿರುವ ಅವರುವಯಸ್ಸನ್ನು ಮಿತಿಯಾಗಿಸಿಕೊಳ್ಳದೇ ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯುವ ವಿಜ್ಞಾನಿಗಳು ಮಾನವಕುಲಕ್ಕೆ ಒಳಿತಾಗುವಂತಹ ಸಂಶೋಧನೆಗಳನ್ನು ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.

ಇಟಲಿಯ ಮಿಲಾನ್ ನಗರದ ‘ಇನೈ ಎನ್ರಿಕೊ ಫೌಂಡೇಷನ್’ ನೀಡುವ ಈ ಪ್ರಶಸ್ತಿಯು ₹1.87 ಕೋಟಿ ನಗದು ಬಹುಮಾನವನ್ನು ಒಳಗೊಂಡಿದೆ. 2021ರ ಅಕ್ಟೋಬರ್ 14ರಂದು ಇಟಲಿಯ ಅಧ್ಯಕ್ಷರ ಅರಮನೆಯಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊ.ರಾವ್‌ ಅವರು ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಪ್ರತಿಷ್ಠಾನದವರು ಪದಕ ಪುರಸ್ಕಾರವನ್ನು ಬೆಂಗಳೂರಿಗೆ ಕಳಿಸಿಕೊಟ್ಟಿದ್ದರು. ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಸಮಾರಂಭವನ್ನು ಏರ್ಪಡಿಸಿಪ್ರಶಸ್ತಿ ಪ್ರದಾನ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಡಾ.ಇಂದುಮತಿ ರಾವ್, ಜೆಎನ್‌ಸಿಎಎಸ್ಆರ್ ಮುಖ್ಯಸ್ಥ ಪ್ರೊ.ಜಿ.ಯು.ಕುಲಕರ್ಣಿ ಹಾಗೂ ನೂರಾರು ವಿಜ್ಞಾನಿಗಳು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.