ADVERTISEMENT

ಆಸ್ಪತ್ರೆ ದುರವಸ್ಥೆ: ಮತ್ತೆ 4 ಪ್ರಕರಣ

ಪೊಲೀಸ್‌ ತಪಾಸಣಾ ವರದಿ ಆಧರಿಸಿ ವಿಚಾರಣೆ ಆರಂಭಿಸಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 22:01 IST
Last Updated 6 ಸೆಪ್ಟೆಂಬರ್ 2022, 22:01 IST

ಬೆಂಗಳೂರು: ನಗರದ ಮಿಂಟೊ ಕಣ್ಣಿನ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ಮತ್ತು ಬಿಬಿಎಂಪಿ ಅಧೀನದ ಹತ್ತು ಆಸ್ಪತ್ರೆಗಳಲ್ಲಿನ ದುರವಸ್ಥೆ ಕುರಿತು ನಾಲ್ಕು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ವಿಚಾರಣೆ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆಗಳು, ದುರಾಡಳಿತ, ನಿಯಮ ಉಲ್ಲಂಘನೆ, ರೋಗಿಗಳಿಗೆ ಸೇವೆ ಒದಗಿಸುವುದರಲ್ಲಿನ ಲೋಪ ದೋಷಗಳ ಕುರಿತು ದಿಢೀರ್‌ ತಪಾಸಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದರು. ತನಿಖಾ ತಂಡಗಳು ಸಲ್ಲಿಸಿರುವ ವರದಿಗಳ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಮಿಂಟೊ ಆಸ್ಪತ್ರೆಯಲ್ಲಿ ರೋಗಿಗಳಿಗೆ ತಟ್ಟೆ, ಲೋಟ ಪೂರೈಸದೇ ಇರುವುದು, ಸರಿಯಾಗಿ ಬೇಯಿಸದ ಆಹಾರ ಪೂರೈಕೆ, ಸ್ಕ್ಯಾನಿಂಗ್‌ ಸೌಲಭ್ಯ ಇಲ್ಲದಿರುವುದು, ಆಸ್ಪತ್ರೆಯ ಹೊರಗಿನ ಕೊಠಡಿಯೊಂದರಲ್ಲಿ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿ ಇಟ್ಟಿರುವುದು ಹಾಗೂ ವೈದ್ಯರು ಹೊರಗಿನ ಔಷಧಿ ಅಂಗಡಿ ಗಳಿಂದ ಔಷಧಿ ತರುವಂತೆ ಚೀಟಿ ಬರೆದುಕೊಡುತ್ತಿರುವುದು ಪತ್ತೆಯಾಗಿದೆ’ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದರು.

ADVERTISEMENT

‘ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಸಿಬ್ಬಂದಿ ಗುರುತಿನ ಚೀಟಿ ಧರಿ ಸುವುದಿಲ್ಲ. ವೈದ್ಯರು ಹೊರಗಡೆ ಖಾಸಗಿ ಸೇವೆ ಒದಗಿಸುತ್ತಿರುವ ದೂರುಗಳಿವೆ. ವೈದ್ಯರು ಮತ್ತು ಸಿಬ್ಬಂದಿ ಕೊರತೆ ಹೆಚ್ಚಿನ ಪ್ರಮಾಣದಲ್ಲಿದೆ. ಹಾಜರಾತಿ ವಹಿ ಮತ್ತು ನಗದು ಘೋಷಣಾ ವಹಿ ನಿರ್ವಹಿಸುತ್ತಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

‘ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಯ್ದುಕೊಂಡಿಲ್ಲ. ಅವಧಿ ಮೀರಿದ ಆಹಾರ ಪದಾರ್ಥಗಳು ಉಗ್ರಾಣದಲ್ಲಿ ಪತ್ತೆಯಾಗಿವೆ. ನಗದು ಘೋಷಣಾ ವಹಿ ನಿರ್ವಹಣೆ ಮಾಡುತ್ತಿಲ್ಲ. ವೈದ್ಯರು ಮತ್ತು ಸಿಬ್ಬಂದಿ ಕೊರತೆ ತೀವ್ರವಾಗಿದೆ’ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದರು.

‘ಬಿಬಿಎಂಪಿ ಅಧೀನದ ಹತ್ತು ಹೆರಿಗೆ ಆಸ್ಪತ್ರೆಗಳು ಮತ್ತು ರೆಫರಲ್‌ ಆಸ್ಪತ್ರೆಗಳನ್ನು ತಪಾಸಣೆ ನಡೆಸಲಾಗಿದೆ. ರೋಗಿಗಳಿಗೆ ಸರಿಯಾದ ಊಟ ಒದಗಿಸದೇ ಇರುವುದು, ಸ್ವಚ್ಛತೆ ಕಾಯ್ದು ಕೊಳ್ಳದಿರುವುದು, ಪ್ರಯೋಗಾಲಯ, ಎಕ್ಸ್‌ರೇ ಮತ್ತು ಸ್ಕ್ಯಾನಿಂಗ್‌ ಸೌಲಭ್ಯದ ಕೊರತೆ, ಖಾಸಗಿ ಔಷಧಿ ಅಂಗಡಿಗಳಿಂದ ಔಷಧಿ ತರುವಂತೆ ರೋಗಿಗಳಿಗೆ ಚೀಟಿ ಬರೆದು ಕೊಡುವುದು ಪತ್ತೆಯಾಗಿದೆ’ ಎಂದು ತನಿಖಾ ತಂಡ ವರದಿ ಸಲ್ಲಿಸಿತ್ತು.

ಈ ಸಂಬಂಧ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಲೋಕಾ ಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಆಯು ಕ್ತರು, ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು, ಎಲ್ಲ ಆಸ್ಪತ್ರೆಗಳ ಮುಖ್ಯ ಸ್ಥರು, ಬಿಬಿಎಂಪಿ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ಆರೋಗ್ಯಾಧಿಕಾರಿ ಸೇರಿದಂತೆ ಹಲವರಿಗೆ ನೋಟಿಸ್‌ ಜಾರಿಗೆ ಆದೇಶಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.