ADVERTISEMENT

ಕಲಿಕೆಯಿಂದ ಹೊರಗುಳಿದವರಿಗೆ ವೃತ್ತಿಪರ ತರಬೇತಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 22:31 IST
Last Updated 8 ನವೆಂಬರ್ 2020, 22:31 IST

ಬೆಂಗಳೂರು: ಆರ್ಟ್‌ ಆಫ್ ಲಿವಿಂಗ್ ಸಹಯೋಗದಲ್ಲಿ ಬಾಷ್ ಇಂಡಿಯಾವು ಕಾಲೇಜು ಮತ್ತು ಪ್ರೌಢಶಾಲೆ ತೊರೆದವರಿಗೆ ವೃತ್ತಿಪರ ತರಬೇತಿ ಪ್ರಾರಂಭಿಸಿದೆ.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೌಶಲ ಕೇಂದ್ರವನ್ನು ಉದ್ಘಾಟಿಸಿದ ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ, ‘ನಿರುದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರದ ಜತೆಗೆ ಕಂಪನಿಗಳು ಹಾಗೂ ಸರ್ಕಾರೇತರ ಸಂಸ್ಥೆ ಸಹ ಕಾರ್ಯನಿರ್ವಹಿಸಬೇಕಿದೆ. ವಿದ್ಯಾರ್ಥಿಗಳು ಕೌಶಲಗಳನ್ನು ವೃದ್ಧಿಸಿಕೊಂಡಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮಗಳು ಹೆಚ್ಚಬೇಕು’ ಎಂದು ತಿಳಿಸಿದರು.

ಬಾಷ್ ಗ್ರೂಪ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ, ‘ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಯುವಜನತೆಗೆ ತರಬೇತಿ ನೀಡಲಾಗುತ್ತಿದೆ. ದೇಶದಾದ್ಯಂತ ಇರುವ 466 ಬ್ರಿಡ್ಜ್ ಕೇಂದ್ರಗಳಲ್ಲಿ 30 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ತರಬೇತಿ ಪಡೆದುಕೊಳ್ಳಲಿದ್ದಾರೆ. ಮೂರು ತಿಂಗಳ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ವಿವಿಧೆಡೆ ಉದ್ಯೋಗ ಪಡೆಯಲು ಈ ಪ್ರಮಾಣಪತ್ರ ಸಹಕಾರಿಯಾಗಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.