ADVERTISEMENT

ಬೆಂಗಳೂರು: ಕಾಲೇಜಿನಲ್ಲಿ ಕಾರ್ಯಕ್ರಮ: ಮಾಹಿತಿ ಕಡ್ಡಾಯ– ಪೊಲೀಸ್ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 16:22 IST
Last Updated 20 ಸೆಪ್ಟೆಂಬರ್ 2025, 16:22 IST
ಸೀಮಾಂತ್‌ ಕುಮಾರ್ ಸಿಂಗ್‌ 
ಸೀಮಾಂತ್‌ ಕುಮಾರ್ ಸಿಂಗ್‌    

ಬೆಂಗಳೂರು: ‘ಕಾಲೇಜಿನಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಕುರಿತು ಪೊಲೀಸರಿಗೆ ಮೊದಲೇ ಮಾಹಿತಿ ನೀಡಬೇಕು’ ಎಂದು ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ ಕುಮಾರ್ ಸಿಂಗ್‌ ಸೂಚಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಮೊದಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಆಡಳಿತ ಮಂಡಳಿಯವರಿಗೆ ಸೂಚಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಆವಲಹಳ್ಳಿಯಲ್ಲಿ ನಡೆದಿದ್ದ ಗಲಾಟೆ ಬಳಿಕ 8 ಮಂದಿಯನ್ನು ಆಡಳಿತ ಮಂಡಳಿಯವರು ನಿರ್ಬಂಧಿಸಿದ್ದಾರೆ. ಕಾನೂನು ಕ್ರಮ ಸಹ ಕೈಗೊಳ್ಳಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ಮರುಕಳಿಸಬಾರದು. ನಗರದ ಯಾವುದೇ ಕಾಲೇಜಿನಲ್ಲಿ ಆಯೋಜನೆ ಆಗುವ ಕಾರ್ಯಕ್ರಮಗಳ ಕುರಿತು ಪೊಲೀಸರೊಂದಿಗೆ ಮೊದಲೇ ಚರ್ಚಿಸಬೇಕು. ಕಾಲಮಿತಿ ನಿಗದಿಪಡಿಸಬೇಕು’ ಎಂದು ಸೀಮಾಂತ್‌ಕುಮಾರ್ ಹೇಳಿದರು.

ADVERTISEMENT

ಆವಲಹಳ್ಳಿ ವ್ಯಾಪ್ತಿಯಲ್ಲಿರುವ ನರ್ಸಿಂಗ್ ಕಾಲೇಜ್‌ನಲ್ಲಿ ಬುಧವಾರ ಆಯೋಜಿಸಿದ್ದ ಓಣಂ ಸಂಭ್ರಮಾಚರಣೆ ಸಂದರ್ಭದಲ್ಲಿ ತೃತೀಯ ವರ್ಷದ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿತ್ತು. ತಮಗೆ ಮಾಹಿತಿ ನೀಡದೇ ಓಣಂ ಆಯೋಜಿಸಿರುವುದನ್ನು ಹಿರಿಯ ವಿದ್ಯಾರ್ಥಿಗಳು ವಿರೋಧಿಸಿದ್ದರು. ಅಲ್ಲಿಂದ ಆರಂಭವಾದ ಹಿರಿಯ‌- ಕಿರಿಯ ವಿದ್ಯಾರ್ಥಿಗಳ ಗುಂಪಿನ ಗಲಾಟೆ ರಸ್ತೆಗಿಳಿದು ಬಡಿದಾಡಿಕೊಳ್ಳುವ ಹಂತಕ್ಕೆ ತಲುಪಿತ್ತು. ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳ ಬಡಿದಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪರಸ್ಪರ ಹೊಡೆದಾಟ ನಡೆಸಿಕೊಂಡ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಸಿ, ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.