ಬ್ಯಾಟರಾಯನಪುರ ಕ್ಷೇತ್ರದ ಕುವೆಂಪುನಗರ ವಾರ್ಡ್ ವ್ಯಾಪ್ತಿಯ ಸಿಂಗಾಪುರದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ನಡೆಸಿದರು.
ಯಲಹಂಕ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಬ್ಯಾಟರಾಯನಪುರ ಕ್ಷೇತ್ರದ ಕುವೆಂಪುನಗರ ವಾರ್ಡ್ ವ್ಯಾಪ್ತಿಯ ಸಿಂಗಾಪುರದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ‘ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದೆ. ಈಗಾಗಲೇ ₹10 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಇನ್ನೂ ₹10 ಕೋಟಿ ಅನುದಾನದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ, ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 60 ಹಾಸಿಗೆಗಳ ಈ ಆಸ್ಪತ್ರೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಬೇಕು. ಇದೇ ಉದ್ದೇಶದಿಂದ ಕಾಮಗಾರಿಯ ಪ್ರಗತಿ ಪರೀಶೀಲನೆ ನಡೆಸಲಾಗಿದೆ’ ಎಂದು ತಿಳಿಸಿದರು.
‘ಇಲ್ಲಿ ಆಸ್ಪತ್ರೆ ನಿರ್ಮಾಣವಾಗುವುದರಿಂದ ಸುತ್ತಮುತ್ತಲ ಜನರಿಗೆ ಸಮೀಪದಲ್ಲೇ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗುತ್ತದೆ. ಜೊತೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಯ ಮೆಲಿನ ಒತ್ತಡವೂ ಕಡಿಮೆಯಾಗಲಿದೆ’ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ವಿ.ವಿ.ಪಾರ್ತಿಬರಾಜನ್, ಬೆಂಗಳೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರವೀಂದ್ರನಾಥ ಮೇಟಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶೈಲಕುಮಾರ್.ಎಚ್.ಕೆ, ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಸುರೋಳ್ಕರ್ ವಿಕಾಸ್ ಕಿಶೋರ್, ಮುಖ್ಯ ಆರೋಗ್ಯ ಅಧಿಕಾರಿ ಡಾ.ಸೈಯದ್ ಸಿರಾಜ್ ಉದ್ದೀನ್ ಮದನಿ, ಬಿಬಿಎಂಪಿ ಯಲಹಂಕ ವಲಯದ ಆರೋಗ್ಯ ಅಧಿಕಾರಿ ಸಿದ್ದಪ್ಪಾಜಿ, ಕಾರ್ಯನಿರ್ವಾಹಕ ಎಂಜಿನಿಯರ್ ರಘುನಾಥ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಜಿ.ಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು.
ಡಯಾಲಿಸಿಸ್‌ಗಾಗಿಯೇ ಆಸ್ಪತ್ರೆಯಲ್ಲಿ 30 ಬೆಡ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ. ಇದಲ್ಲದೇ ಎರಡನೇ ಹಂತದಲ್ಲಿ ತಾಯಿ-ಮಗುವಿನ ಚಿಕಿತ್ಸೆಗಾಗಿ 30 ಬೆಡ್‌ಗಳ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ.ಕೃಷ್ಣಬೈರೇಗೌಡ, ಕಂದಾಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.