ADVERTISEMENT

ಬೆಂಗಳೂರು | ಪಿಪಿಇ ಕಿಟ್ ಧರಿಸಿಕೊಂಡೇ ಪ್ರತಿಭಟಿಸಿದ ಶುಶ್ರೂಷಕರು

ಎನ್‌ಪಿಎಸ್ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ *ಸಿಎಂ ಜತೆಗೆ ಚರ್ಚಿಸುವುದಾಗಿ ಸಚಿವ ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 19:46 IST
Last Updated 1 ಆಗಸ್ಟ್ 2020, 19:46 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೌರಿಂಗ್ ಆಸ್ಪತ್ರೆಯ ಮುಂಭಾಗ ಶುಶ್ರೂಷಕರು ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೌರಿಂಗ್ ಆಸ್ಪತ್ರೆಯ ಮುಂಭಾಗ ಶುಶ್ರೂಷಕರು ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿ, ಜ್ಯೋತಿ ಸಂಜೀವಿನಿ ಯೋಜನೆಯಡಿ ನಗದುರಹಿತ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗಳ ಶುಶ್ರೂಷಕರು ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ ಕಿಟ್) ಧರಿಸಿಯೇ ಶನಿವಾರ ಪ್ರತಿಭಟನೆ ನಡೆಸಿದರು.

ಕೈಗಳಿಗೆ ಕಪ್ಪು ಪಟ್ಟಿ ಧರಿಸಿದ್ದ ಶುಶ್ರೂಷಕರು ಆಸ್ಪತ್ರೆಯ ಮುಂದೆಯೇ ಬೇಡಿಕೆಗಳ ಭಿತ್ತಿಪತ್ರ ಹಿಡಿದು ಧರಣಿ ನಡೆಸಿದರು. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಿಗೆ ಒದಗಿಸಿದ ಸೌಲಭ್ಯವನ್ನು ನಮಗೂ ನೀಡಬೇಕು ಎಂದು ನೂರಕ್ಕೂ ಅಧಿಕ ಶುಶ್ರೂಷಕರು ಸರ್ಕಾರವನ್ನು ಒತ್ತಾಯಿಸಿದರು.

‘ಭಯದಲ್ಲಿಯೇ ಕೊರೊನಾ ಸೋಂಕಿತರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಈಗಾಗಲೇ ಹಲವು ಶುಶ್ರೂಷಕರು ಸೋಂಕಿತರಾಗಿದ್ದಾರೆ. ನಮಗೆ ಹಾಗೂ ನಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ಸುರಕ್ಷತೆಯಿಲ್ಲ. ಇದರಿಂದಾಗಿ ಕೆಲವರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಬಾರದು ಎಂಬ ಕಾರಣಕ್ಕೆ ಕ್ವಾರಂಟೈನ್‌ನಲ್ಲಿ ಇರುವವರು ಹಾಗೂ ಹೆಚ್ಚುವರಿ ಶುಶ್ರೂಷಕರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ. ಈಗಲಾದರೂ ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿ, ಎನ್‌ಪಿಎಸ್, ವಿಮಾ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಶುಶ್ರೂಷಕರು ಆಗ್ರಹಿಸಿದರು.

ADVERTISEMENT

‘ಐದು ವರ್ಷಗಳಿಂದ ಹಲವು ಬಾರಿ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದ ‘ಜ್ಯೋತಿ ಸಂಜೀವಿನಿ’ ಅಥವಾ ಸರ್ಕಾರಿ ನೌಕರರಿಗೆ ಲಭ್ಯವಿರುವ ಯಾವುದೇ ನಗದುರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ನಮಗೆ ಅನ್ವಯವಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯವೂ ನಮಗಿಲ್ಲ. ಕೆಜಿಐಡಿ ಸಂಖ್ಯೆಯನ್ನೂ ನೀಡಿಲ್ಲ. ಹೀಗಾಗಿ ನಾವು ಸೋಂಕಿತರಾದಲ್ಲಿ ಹಣ ಪಾವತಿಸಿಯೇ ಚಿಕಿತ್ಸೆ ಪಡೆಯಬೇಕಿದೆ’ ಎಂದು ವೈದ್ಯಕೀಯ ಸಿಬ್ಬಂದಿ ಅಮರನಾಥ ಬೇಸರ ವ್ಯಕ್ತಪಡಿಸಿದರು.

‘ಬೇಡಿಕೆ ಈಡೇರುವವರೆಗೂ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುತ್ತೇವೆ. ಜೊತೆಗೆ ಕೊರೊನಾ ಸೋಂಕಿತರಿಗೆ ಸೇವೆಯನ್ನು ಮುಂದುವರೆಸುತ್ತೇವೆ’ ಎಂದರು.

ಸಿಎಂ ಜೊತೆ ಮಾತುಕತೆ

‘ಶುಶ್ರೂಷಕರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆಗೆ ಕೂಡಲೇ ಚರ್ಚಿಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು. ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿ‌ಂದ ಸಿಬ್ಬಂದಿ ಕೆಲಸಕ್ಕೆ ಗೈರಾಗಬಾರದು. ಸಿಬ್ಬಂದಿಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೂ ಚರ್ಚಿಸುತ್ತೇನೆ. ಸರ್ಕಾರವು ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.