ADVERTISEMENT

ತಪ್ಪಿಸಿಕೊಂಡು ಮತ್ತೆ ಸಿಕ್ಕಿಬಿದ್ದ ‘ಸೈಕೊ ಕಿಲ್ಲರ್’

ಆಸ್ಪತ್ರೆಗೆ ದಾಖಲಾಗಿದ್ದ ರಾಜೇಂದ್ರ ಪೊಲೀಸರು ನಿದ್ದೆಯಲ್ಲಿದ್ದಾಗ ಪರಾರಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:55 IST
Last Updated 3 ಏಪ್ರಿಲ್ 2019, 19:55 IST
ರಾಜೇಂದ್ರ
ರಾಜೇಂದ್ರ   

ಬೆಂಗಳೂರು: ತನ್ನ ಎರಡೂ ಕಾಲುಗಳಿಗೆ ಗುಂಡೇಟು ಬಿದ್ದಿದ್ದರೂ ‍ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದ ರಾಜೇಂದ್ರ ಅಲಿಯಾಸ್ ಸೈಕೊ ರಾಜನನ್ನು (28), ಆತ ತಪ್ಪಿಸಿಕೊಂಡ ಎರಡೇ ತಾಸಿನಲ್ಲಿ ಪೊಲೀಸರು ಪುನಃ ಬಂಧಿಸಿದ್ದಾರೆ.

ಮಾದಕ ವ್ಯಸನಿಯಾದ ರಾಜೇಂದ್ರ, ಗಾಂಜಾ ಖರೀದಿಗೆ ಹಣ ಕೊಡಲಿಲ್ಲವೆಂದು ತನ್ನ ತಂಗಿಯನ್ನೇ ಜೀವಂತವಾಗಿ ಸುಟ್ಟಿದ್ದ. ಅಷ್ಟೇ ಅಲ್ಲದೇ ತಿಲಕ್‌ನಗರ, ಕದಿರೇನಹಳ್ಳಿ ಹಾಗೂ ಜೆ.ಪಿ.ನಗರದಲ್ಲಿ ಮೂವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹಣ ದೋಚಿದ್ದ.

ಮಾರ್ಚ್ 30ರಂದು ಕೋಣನಕುಂಟೆಯ ಡಬಲ್‌ ರಸ್ತೆಯಲ್ಲಿ ಪೊಲೀಸರು ಕಾಲುಗಳಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಗುಂಡುಗಳನ್ನು ಹೊರತೆಗೆದಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ನಾಲ್ಕು ದಿನಗಳವರೆಗೆ ವಿಶ್ರಾಂತಿ ಬೇಕೆಂದು ಹೇಳಿದ್ದರು.

ADVERTISEMENT

ತೆವಳಿಕೊಂಡೇ ಕೆಳ ಹೋದ: ‘ಆಸ್ಪತ್ರೆಯ ಮೊದಲ ಮಹಡಿಯ ಕೊಠಡಿಯಲ್ಲಿ ರಾಜೇಂದ್ರನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕುಮಾರಸ್ವಾಮಿ ಲೇಔಟ್ ಠಾಣೆಯ ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ಆತನ ಭದ್ರತೆಗೆ ನಿಯೋಜಿಸಲಾಗಿತ್ತು. ಬುಧವಾರ ನಸುಕಿನ ವೇಳೆ (4.30ರ ಸುಮಾರಿಗೆ) ಕೊಠಡಿಯಿಂದ ಆಚೆ ಬಂದಿರುವ ರಾಜೇಂದ್ರ, ಸಿಬ್ಬಂದಿ ನಿದ್ರೆ ಮಾಡುತ್ತಿರುವುದನ್ನು ಕಂಡು ತೆವಳಿಕೊಂಡೇ ಕೆಳಗೆ ಹೋಗಿದ್ದಾನೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಳಿಕ ಬ್ಯಾಂಡೇಜ್‌ ಕಿತ್ತೆಸೆದು ಆಟೊ ನಿಲ್ದಾಣಕ್ಕೆ ತೆರಳಿರುವ ಆತ, ‘ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ಈ ವೈದ್ಯರು ರಾತ್ರೋರಾತ್ರಿ ಡಿಸ್ಚಾರ್ಜ್ ಮಾಡಿದರು. ನನ್ನನ್ನು ಮನೆಗೆ ಬಿಡಿ. ದುಪ್ಪಟ್ಟು ಪ್ರಯಾಣ ದರ ಕೊಡುತ್ತೇನೆ’ ಎಂದು ಚಾಲಕನಿಗೆ ಹೇಳಿದ್ದ. ಅದಕ್ಕೆ ಒಪ್ಪಿದ ಚಾಲಕ, ರಾಜೇಂದ್ರನನ್ನು ಆಟೊದಲ್ಲಿ ಕೂರಿಸಿಕೊಂಡು ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಕಡೆಗೆ ಹೊರಟಿದ್ದ’ ಎಂದು ಹೇಳಿದರು.

‘ಸ್ವಲ್ಪ ಸಮಯದಲ್ಲೇ ಎಚ್ಚರಗೊಂಡ ಹೆಡ್‌ ಕಾನ್‌ಸ್ಟೆಬಲ್‌ಗಳು, ರಾಜೇಂದ್ರ ಕಾಣದಿದ್ದಾಗ ಇಡೀ ಕಟ್ಟಡದಲ್ಲಿ ಹುಡುಕಾಡಿದ್ದರು. ಎಲ್ಲೂ ಪತ್ತೆಯಾಗದಿದ್ದಾಗ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ತಕ್ಷಣ ವಿಶೇಷ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ, ಆರೋಪಿಯನ್ನು 6.30ರ ಸುಮಾರಿಗೇ ಆತನ ಮನೆ ಸಮೀಪವೇ ವಶಕ್ಕೆ ಪಡೆದರು’ ಎಂದು ಅವರು ಮಾಹಿತಿ ನೀಡಿದರು.

‌ಸಿಬ್ಬಂದಿ ಅಮಾನತು

‘ರಾಜೇಂದ್ರ ಒಬ್ಬ ಸೈಕೊ ಕಿಲ್ಲರ್. ರಸ್ತೆ ಬದಿ ಮಲಗಿದವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲುವಂತಹ ಪ್ರವೃತ್ತಿವುಳ್ಳವನು. ಹೀಗಾಗಿ, ಆತನ ಮೇಲೆ ಹೆಚ್ಚು ನಿಗಾ ಇಡಬೇಕು. ಆದರೆ, ಸಿಬ್ಬಂದಿ ಕಾವಲು ಕಾಯುವುದನ್ನು ಬಿಟ್ಟು ನಿದ್ರೆಗೆ ಜಾರಿದ್ದರು. ಹೀಗಾಗಿ, ಕರ್ತವ್ಯಲೋಪ ಆರೋಪದಡಿ ಅವರಿಬ್ಬರನ್ನೂ ಅಮಾನತು ಮಾಡಲಾಗಿದೆ. ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದಡಿ (ಐಪಿಸಿ 224) ರಾಜೇಂದ್ರನ ವಿರುದ್ಧ ವಿ.ವಿ.ಪುರ ಠಾಣೆಯಲ್ಲಿ ಇನ್ನೊಂದು ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.